Thursday, April 26, 2007

ಮಾವು..ಮ್ ಮ್ ಮ್...ಮಾವು..


ಮೊನ್ನೆ ಆಮ್ಮ phone ಮಾಡಿದಾಗ...
"ಮಗೋ..ನಿನ್ನ ಬಾಬ್ತು ಹೇಳಿ 300 ಮಿಡಿ ಹಾಕಿದ್ದೆ.ಒಟ್ಟು ಸುಮಾರು 1000 ಮಿಡಿ ಹಾಕಿದ್ದೆ october ಹೊತ್ತಿಗೆ ಉಪ್ಪು ಖಾರ ಹಿಡಿದಿರ್ತು. ಬಂದಾಗ ತೆಕೊಂಡುಹೋಪಲೆ ಮರೆಯಡ"
(sorry ಅಮ್ಮನ ಈ ಮಾತು ಹವ್ಯಕದಲ್ಲೆ ಬರೆಯಬೆಕಾಯಿತು.ಬೇರೆ ಭಾಷೆಯಲ್ಲಿ ಬರೆದರೆ essence ಕಳೆದು ಹೊಗೊತ್ತೆ.,ಆದ್ರೂ ಅರ್ಥ ಅಗದವರಿಗೆ ಭಾವಾರ್ಥ: ನಿನ್ನ ಲೆಕ್ಕಕ್ಕೆ ೩೦೦ ಮಿಡಿ ಉಪ್ಪಿನಕಾಯಿ ready ಅಗೊತ್ತೆ ತೆಗೊಂಡುಹೋಗಿ ಮಜಾ ಮಾಡು )
"ಮನೆ ಮುಂದಿನ ತೋತಾಪುರಿ ಮರ,ಅದರ ಪಕ್ಕದ "ಮನೋರಂಜನ್" ಮರ(ತಿಳಿಯದವರಿಗೆ : ಇದೊಂದು ಜಾತಿಯ ಕಸಿ ಮಾವು .ಕಾಯಿ ಅತಿ ಹುಳಿಯಾಗಿದ್ದು ಹಣ್ಣು ಬಹಳ ಸಿಹಿ ಯಾಗಿರುತ್ತದೆ),ಮನೆ ಹಿಂದಿನ ನೆಕ್ಕರೆ ಎಲ್ಲಾ ಚೆನ್ನಾಗಿ ಫಲ ಬಿಟ್ಟಿದೆ."
(ಭಾವಾರ್ಥ: ನಾನು ನನ್ನ ತಮ್ಮ ಮನೆಯಲ್ಲಿ ಇಲ್ಲದೆ ಇರುವುದರಿಂದಾಗುವ ಅನೇಕ ಉಪಯೋಗಗಳಲ್ಲಿ ಒಂದು. ನಾನು,ತಮ್ಮ ಮನೆಯಲ್ಲಿದ್ದರೆ ಬರುವ ಗೆಳೆಯರಿಗೆಲ್ಲ ಮನೆಯ ಮಾವಿನ ಮರದ ಮೇಲೆ ಕಣ್ಣು ಎಲ್ಲರಿಗೂ ಮಾವಿನ ಕಾಯಿ ಸಮಾರಾಧನೆ ಆಗಲೇ ಬೇಕು.ಮನೆಯಲ್ಲಿದ್ದರೆ ನಮಗೆ ತುರಿದ ಮಾವಿನ ಕಾಯಿ ಹಾಕಿದ ಚುರುಮುರಿ ಇಲ್ಲದೇ ಸಂಜೆ ಒಂದು ತೊಟ್ಟು "ಚಾಯ" ಗಂಟಲಿನ ಕೆಳಗೆ ಇಳಿಯುವುದಿಲ್ಲ.)
"ಅಜ್ಜನ ಮನೆಯ ಹೊಳೆಬದಿಯ ಪುಟ್ಟ ಮಾವು ...ಮನೆಯ gate ಎದುರಿನ ಜೀರಿಗೆ ಮಾವು...."
"ಮೊನ್ನೆ ಚಪಾತಿಗೆ ಮಾವಿನ ರಸಾಯನ....."

ಹೀಗೆ ಎಲ್ಲಾ ವಿಷಯಗಳಲ್ಲೂ ಮಾವು ಇತ್ತು.ನನಗೆ ಮನೆಯಲ್ಲಿ correct time ಗೆ ಇಲ್ಲದೇ ಇರುವ ದು:ಖ... ಈ ಮಾವಿನ ಋತುವಿನಲ್ಲಿ ನಾನು ಮನೆಯಲ್ಲಿ ಇಲ್ಲ ಇದೇ ದು:ಖ.

ಅಂದ ಹಾಗೆ ನಮ್ಮ ಶಾಲೆಯ ಎದುರುಗಡೆ ಮಾವಿನ ಮರವಿತ್ತು .ನಮಗೆ ಮಾವಿನ ಕಾಯಿ ತಿನ್ನುವ ಹುಚ್ಚು. ಕೊನೆಗೆ ಕಲ್ಲು ಹೊಡಿಯುವ ಹುಡುಗರಿಗೆ ನಾನೇ ಲೀಡರ್ ಅಂತ ಗೊತ್ತಾಗಿ ನನಗೆ ಮಾವಿನ ಮರ ಕಾಯುವ ಶಿಕ್ಷೆ .ದಿನಾ ಬೆಳಗ್ಗೆ ಶಾಲೆ ಶುರುವಾಗುವ ಮೊದಲು ಬಂದು ಮರಕ್ಕೆ ಕಲ್ಲು ಹೊಡಿಯುವ ಹುಡುಗರ ಹೆಸರಿನ ಪಟ್ಟಿ ಒಪ್ಪಿಸಬೇಕೆಂದು ಪ್ರೇಮಾ ಟೀಚರ್ ಆಜ್ನೆ .
ಹೆಸರು ಬರೆಯದಿರುವುದಕ್ಕೆ ದಿನಕ್ಕೆ ಪ್ರತಿದಿನ ಪ್ರತಿಯೊಬ್ಬರಿಂದಲೂ ಒಂದು ಮಾವಿನಕಾಯಿ ಕಪ್ಪ( ಅದರ ಬದಲು ದಿನಕ್ಕೆ ನಾಲ್ಕಾಣೆ collect ಮಾಡಿದ್ರೂ ಸಾಕಿತ್ತು ಮಿತ್ತಲ್ ಗಿಂತ ಶ್ರೀಮಂತ ಆಗಿರುತ್ತಿದ್ದೆ ;))

ಹಾಸ್ಟೆಲ್ ನಲ್ಲಿ ಇದ್ದಾಗ ನಾನು ಮತ್ತು ನನ್ನ batchmates ಎಲ್ಲ ಮಾವಿನ ಹಣ್ಣು ದಿನಾ ತಂದು ತಿನ್ನುತ್ತಿದ್ವಿ.(seasonನಲ್ಲಿ offcourse).ನಾವು ಮಾವಿನ ಹಣ್ಣು ಕೈಯಲ್ಲಿ ಹಿಡಿದು ಕಚ್ಚಿ ತಿನ್ನುತ್ತಿದ್ವಿ (pure indian style..ವಾನರರ ತರಹ) ಆದರೆ ನಮ್ಮ juniors neat ಆಗಿ british civilized styleನಲ್ಲಿ ಹಣ್ಣನ್ನು ಚೂರಿಯಲ್ಲಿ ಕತ್ತರಿಸಿ ತಿನ್ನುತ್ತಿದ್ದರು. ನಾವು ಆ ತರಹ ತಿನ್ನಲು ಪ್ರಯತ್ನಿಸಿ ಅದರಲ್ಲಿ ಕಚ್ಚಿ ತಿನ್ನುವ ಮಜಾ ಇಲ್ಲ ಅಂತ pure indian styleಗೆ ವಾಪಾಸಾದ್ವಿ.

ನಮ್ಮ ಮನೆಯಲ್ಲಿ ಮಾವಿನ ಹಣ್ಣು ರಸಾಯನ ಮಾಡಿದಾಗೆಲ್ಲ 2 ಭಾಗ ಮಾಡುತ್ತಾರೆ. ಒಂದು ಭಾಗ ನನಗೆ ಇನ್ನೊಂದು ಉಳಿದವರಿಗೆಲ್ಲ..
ಮೊನ್ನೆ ಆಮ್ಮ phone ಮಾಡಿದಾಗ ಮಾವಿನ ಋತು ಮುಗಿಯೊಮೊದಲೆ ಬಾ ಮಗು ಅಂದ್ರು. ನಾನು ಊರಿಗೆ ಹೊಗಬೇಕು.ಎನು ಕಾರಣ ಕೊಡೋದು ಅಂತ ಗೊತ್ತಾಗುತ್ತಿಲ್ಲ.
"ಸಾರ್ ಊರಲ್ಲಿ ಮಾವಿನ season ಅದಕ್ಕೆ ಊರಿಗೆ ಹೋಗ್ಬೆಕು" ಅಂತ ಕೊಡೋದಾ?
"ನಾನು ಊರಿಗೆ ಹೋಗಿ ಮಾವಿನ ಹಣ್ಣಿನ ರುಚಿ ನೋಡದಿದ್ರೆ ನಮ್ಮ ಮನೆಯ ಮಾವಿನ ಮರಗಳೆಲ್ಲ ಮುನಿಸಿಕೊಳ್ಳುತ್ತವೆ."ಅಂತ ಕೊಡೋದಾ?

ಅಂದ ಹಾಗೆ

ಶಾಲೆಗೆ ಹೋಗುವಾಗ ದಾರಿ ಬದಿಯ ಮಾವಿನ ಮರಕ್ಕೆ ಕಲ್ಲು ಹೊಡೆದು ಮಾವಿನ ಹಣ್ಣು ತಿನ್ನುವ ಮಜಾ... ಆ ರುಚಿ...ಮಾರ್ಕೆಟಿಂದ ತಂದ ಅಲ್ಫೊನ್ಸೋದಲ್ಲಿ/ಬಾದಾಮಿಯಲ್ಲಿ/ರಸಪೂರಿಯಲ್ಲಿ ಹುಡುಕುತ್ತಿದ್ದೇನೆ.
ಆ ಮಜಾ ..ಆ ರುಚಿ ಯಾಕೋ ಸಿಗುತ್ತಿಲ್ಲ.

Tuesday, April 24, 2007

ಬಂಗಾರದ ಮನುಷ್ಯ ನಿಗೆ ನಮನ

ರಾಜ್ ಕುಮಾರ್ ..ಡಾ.ರಾಜ್ ... ಆ ಹೆಸರಿಗೆ ಇದ್ದ ಚುಂಬಕ ಶಕ್ತಿ ಎಲ್ಲರಿಗೂ ಗೊತ್ತು. ಶ್ರೀಕೃಷ್ಣನಿಂದ ಮಹಿಷಾಸುರನ ತನಕ, ಹಳ್ಳಿ ಗಮಾರ ನಿಂದ BOND ಶೈಲಿಯ ಪಾತ್ರಗಳನ್ನ ಒಂದೇ easeನಲ್ಲಿ ಮಾಡುತ್ತಿದ್ದ ಅದ್ಬುತ ಕಲಾವಿದ. ಹಾಡುಗಳಿಗೆ ಜೀವ ತುಂಬುತ್ತಿದ್ದ ಹಾಡುಗಾರ. ಅಣ್ಣಾವ್ರ ನೆನಪಿನಲ್ಲಿ ಒಂದು ಬ್ಲಾಗ್ ಬರಿಯಬೇಕು ಅಂತ ಬಹಳ ದಿನದಿಂದ ಯೊಚಿಸುತ್ತಿದ್ದೆ. ಇವತ್ತು ಬರೆದರೆ ಉತ್ತಮ ಅನ್ನಿಸಿತು ಅದಕ್ಕೆ ಬರೆಯುತ್ತಿದ್ದೇನೆ. ಅಭಿಮಾನಿ ದೇವರುಗಳು ಸ್ವೀಕರಿಸಬೇಕು.

ಅಣ್ಣಾವ್ರು ಅಂದ್ರೆ ಮಿಂಚಿನಂತೆ ಮನಸಿಗೆ ಹೊಳೆಯುವುದು ...."ಬಂಗಾರದ ಮನುಷ್ಯ". ಟಿ.ಕೆ.ರಾಮರಾಯರ ಇದೇ ಹೆಸರಿನ ಕಾದಂಬರಿಯ ಚಿತ್ರ ರೂಪಾಂತರ. "ರಾ..ರಾಜೀವಪ್ಪ..."ಅಂತ ಬಾಲಕೃಷ್ಣ ತಮ್ಮ unique style ನಲ್ಲಿ ಅವರನ್ನ ಸಂಭೋಧಿಸುವ ರೀತಿಯೇ ಆ ಪಾತ್ರವನ್ನು ನೆನಪಿನಲ್ಲಿ ಇರುವಂತೆ ಮಾಡಿದ್ದು. ಮೊನ್ನೆ ಗೋವಾ ಚಿತ್ರೋತ್ಸವದಲ್ಲಿ ಡಾ.ರಾಜ್ ನೆನಪಿಗೆ ಇದೇ ಚಿತ್ರ ಪ್ರದರ್ಶಿತವಾಯಿತು.ಹೆಚ್ಚಾಗಿ ಅಪ್ಪ-ಅಮ್ಮ ಮಕ್ಕಳು ಹೆಚ್ಚು film ನೋಡಬಾರದು ಅಂತ insist ಮಾಡ್ತಾರೆ.ಆದ್ರೆ ಬಂಗಾರದ ಮನುಷ್ಯ ನೋಡು ಅಂತ ನನ್ನ force ಮಾಡಿ ಕೂರಿಸಿದ್ದು ನನ್ನ ಅಮ್ಮ. ಅಂದ ಹಾಗೆ ಬಂಗಾರದಮನುಷ್ಯ ಒಂದು ಚಿತ್ರ ಮಂದಿರದಲ್ಲಿ 2 ವರ್ಷ, 5 ಚಿತ್ರ ಮಂದಿರದಲ್ಲಿ 1 ವರ್ಷ ಓಡಿದ್ದು ಒಂದು ಸರ್ವಕಾಲಿಕ ದಾಖಲೆ.
"ಯಾರೇ ಕೂಗಾಡಲಿ ..ಊರೇ ಹೋರಾಡಲಿ".ಇದು ಡಾ.ರಾಜ್ ಮೊದಲ ಬಾರಿಗೆ ಹಿನ್ನಲೆ ಗಾಯನ ಮಾಡಿದ ಹಾಡು..ಚಿತ್ರ:"ಸಂಪತ್ತಿಗೆ ಸವಾಲ್" , ಉತ್ತರ ಕರ್ನಾಟಕದ ಕಂಪನಿ ನಾಟಕದ ಚಿತ್ರ ರೂಪಾಂತರ. ಬರೆದವರು ಯಾರು ಆಂತ ನೆನಪಾಗುತ್ತಿಲ್ಲ ಬಹುಷ ಧುತ್ತರಗಿಯವರು ಇರಬೇಕು.ಕೈಯಲ್ಲಿ ಗಂಡುಗೊಡಲಿ ಹಿಡಿದು "ಸಾಹುಕಾರ್ ಸಿದ್ದಪ್ಪ ..ನಿನ್ನ ಸಂಪತ್ತಿಗೆ ನನ್ನ ಸವಾಲ್" dialougueನ ಮರಿಯೋಕೆ ಸಾಧ್ಯ ವೇ?
"ಆಡಿಸಿ ನೋಡು ..ಬೀಳಿಸಿ ನೋಡು .." ಹೌದು ನಾನು ಮಾತಾಡ್ತಿರೋದು "ಕಸ್ತೂರಿ ನಿವಾಸ" . ಈ ಚಿತ್ರದ ಬಗ್ಗೆ ಎನೂ ಬರಿಯೊಲ್ಲ. ಚಿತ್ರ ನೋಡಿ ಚಿತ್ರದ Intensity ತಿಳಿಯಿರಿ.
"ಕುಲದಲ್ಲಿ ಕೀಳ್ಯಾವುದೋ.." ಎಂ.ಪಿ.ಶಂಕರ್ ಮೇಲೆ ಚಿತ್ರಿಕರಿಸಲಾಗಿರುವ ಈ ಹಾಡು "ಸತ್ಯ ಹರಿಶ್ಚಂದ್ರ"ಚಿತ್ರದ್ದು.ಚಿತ್ರ ಬಹಳ ಹಿಟ್ ಆಯಿತು.ಆದ್ರೆ ಚಿತ್ರಕ್ಕಿಂತ ಹಿಟ್ ಆಗಿದ್ದು ಚಿತ್ರದ ಹಾಡು "ಕುಲದಲ್ಲಿ ಕೀಳ್ಯಾವುದೋ.." . ಕರ್ನಾಟಕದ ಯಾವ ಮೂಲೆಗೆ ಹೋದರೂ ಜನ ಆರ್ಕೆಸ್ತ್ರಾದಲ್ಲಿ ನಿಮ್ಮ ಕೋರಿಕೆಯ ಹಾಡು ಅಂದಾಗ ಒಕ್ಕೊರಳಿನಿಂದ ಕೂಗುವುದು ..."ಕುಲದಲ್ಲಿ ಕೀಳ್ಯಾವುದೋ.."
ಭಾರತಿಸುತ ಅವರ ಐತಿಹಾಸಿಕ ಕಾದಂಬರಿಗೆ ಹೆಸರು ತಂದುಕೊಟ್ಟಿದ್ದು ಆ ಕಾದಂಬರಿ ಆಧಾರಿತ ಚಿತ್ರ "ಹುಲಿಯ ಹಾಲಿನ ಮೇವು" .ಅಹಾ...ಯಾರದ್ರು ಮರಿಬಹುದೇ ಆ ಸುಂದರ ಯುಗಳ ಗೀತೆ "ಬೆಳದಿಂಗಳಾಗಿ ಬಾ...."
ನರಸಿಂಹಯ್ಯನವರ ಪತ್ತೆದಾರಿ ಕಾದಂಬರಿಗಳ famous ಪಾತ್ರ "CID ಏಜೆಂಟ್ 999" ಗೆ ಜೀವ ತಂದಿದ್ದು ರಾಜ್.."ಜೇಡರ ಬಲೆ"ಯಿಂದ ಶುರುವಾಯಿತು BOND ಯುಗ. ಸತತ ಆರು ವರ್ಷದಲ್ಲಿ ಆರು ಚಿತ್ರಗಳು .ಎಲ್ಲಾ ಚಿತ್ರಗಳು ಕಪ್ಪು ಬಿಳುಪು ಚಿತ್ರ ಗಳಾಗಿದ್ದರೂ technically ಮತ್ತು ಕಥೆ ಯ ವಿಷಯದಲ್ಲಿ ಚೆನ್ನಾಗಿದೆ.ನಂತರ ಬಹಳ ವರ್ಷಗಳ ನಂತರ "CID ಏಜೆಂಟ್ 999" ಅಥವಾ "the most intelligent intelligence officer"ಪ್ರಕಾಶ್ ಮರಳಿ ಬಂದಿದ್ದು "ಆಪರೇಶನ್ ಡೈಮಂಡ್ ರಾಕೆಟ್ " ಚಿತ್ರ ದೊಂದಿಗೆ, ಸರಳವಾಗಿ ಹೇಳುವುದಾದರೆ ಇದು Ian fleming's "DR.NO "ದ ರೀಮೇಕ್. ಅದು "CID ಏಜೆಂಟ್ 999" ಸರಣಿಯ ಕೊನೆ ಚಿತ್ರ.
"CID ಏಜೆಂಟ್ 999" ಸರಣಿಯ ಎರಡನೇ ಚಿತ್ರ "ಗೋವಾದಲ್ಲಿ ಏಜೆಂಟ್ 999" ದ ಮೂಲಕ ಒಬ್ಬ ಹೊಸ ನಟಿ ಚಿತ್ರರಂಗಕ್ಕೆ ಕಾಲಿಟ್ಟಳು. as 12 year old contact for "CID ಏಜೆಂಟ್ 999" .ಆಕೆ ಈಗ ಬಾಲಿವುಡ್ಡಿನ ಚಿರಯುವತಿ "ರೇಖಾ "
"ಮಾನವ ಮೂಳೆ ಮಾಂಸದ ತಡಿಕೆ " ..."ಭಕ್ತ ಕುಂಬಾರ" ಚಿತ್ರದ ಗೀತೆ . ಇದರ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟದ್ದು "roop ki raani " ಶ್ರೀದೇವಿ.ರಾಜ್ ಕಾಲ ಕೆಳಗೆ ಸಿಕ್ಕಿ ಸಾಯುವ ಮಗುವಿನ ಪಾತ್ರ ಮಾಡಿದ್ದು ಹವಾ ಹವಾಯಿ ಬೆಡಗಿ.
ರಾಜ್ ಅಬಿನಯಿಸಿದ ಮೊದಲ ಚಿತ್ರ "ಬೇಡರ ಕಣ್ಣಪ್ಪ " ಕ್ಕೆ ರಾಷ್ಟ್ರ ಪ್ರಶಸ್ತಿ ಬಂತು.ಈ ಚಿತ್ರದ ನಿರ್ಮಾಪಕರಿಗೆ ಈ ಉದ್ದ ಮೂಗಿನ ಹೀರೋ ಯಾಕೊ ಪಾತ್ರಕ್ಕೆ ಸರಿಯಿಲ್ಲ ಅನ್ನಿಸಿತ್ತಂತೆ.ಆದರೆ ಮುಂದೆ ನಡೆದದ್ದು ಇತಿಹಾಸ.
1977 ರಲ್ಲಿ ಚಿಕ್ಕಮಗಳೂರಿನ ಮರು ಚುನಾವಣೆಯಲ್ಲಿ ಜನತಾ ಪಕ್ಷದ ಅಭ್ಯರ್ಥಿಯಾಗಿ ನಿಲ್ಲಿ ಅಂದಾಗ ನಾನು ಕರ್ನಾಟಕಕ್ಕೆ ಸೇರಿದವನು , ಯಾವುದೇ ಪಕ್ಷಕ್ಕೆ ಅಲ್ಲ ಎಂದು ನಯವಾಗಿ ನಿರಾಕರಿಸಿದರಂತೆ.ಎಲ್ಲಾದ್ರೂ ರಾಜ್ ಚುನಾವಣೆಯಲ್ಲಿ ನಿಂತಿದ್ದರೆ ..mostly ಮುಖ್ಯಮಂತ್ರಿ ಆಗುತ್ತಿದ್ದರೋ ಎನೋ.
ರಾಜಣ್ಣ ನಟನೆ ಮತ್ತು ಗಾಯನಕ್ಕೆ ರಾಷ್ಟ್ರ ಪ್ರಶಸ್ತಿ ಪಡೆದಿರುವ ಎಕೈಕ ಕಲಾವಿದ
ಪಟ್ಟಿ ಮಾಡುತ್ತಾ ಹೋದರೆ ಹಲವಾರು ಚಿತ್ರರತ್ನಗಳು ನನ್ನ ಮೇಲಿನ ಪಟ್ಟಿಯಿಂದ ಬಿಟ್ಟು ಹೋಗಿವೆ..ಅವುಗಳಲ್ಲಿ ಮುಖ್ಯವಾದುವು :ಶ್ರೀ ಕೃಷ್ಣದೇವರಾಯ, ರಣಧೀರ ಕಂಠೀರವ, ಇಮ್ಮಡಿ ಪುಲಿಕೇಶಿ,ಗಂಧದ ಗುಡಿ,ಮಯೂರ..ಇತ್ಯಾದಿ
ಯಾರು ಎನೇ ಹೇಳಲಿ ..ಕನ್ನಡಿಗರ ಮನದಲ್ಲಿ ರಾಜ್ ಸ್ಥಾನ ಬೇರೆಯವರಿಗೆ ತುಂಬಲು ಸಾಧ್ಯವಿಲ್ಲ.ತಮ್ಮ ಚಿತ್ರಗಳ ಮೂಲಕ ರಾಜ್ ಚಿರಾಯು