Saturday, November 24, 2007

ರೈಲು ಬಿಡೋಕೆ ಶುರು ಮಾಡ್ತಾರಂತೆ


ಇವತ್ತಿನ ಪತ್ರಿಕೆಯಲ್ಲಿ ಡಿಸೆಂಬರ್ 8 ರಿಂದ ಮಂಗಳೂರು - ಬೆಂಗಳೂರು ರೈಲು ಆರಂಭಿಸುವುದಾಗಿ ರೈಲ್ವೇ ಇಲಾಖೆ ಹೇಳಿದೆ.ಲಾಲು ಯಾದವ್ ಅದನ್ನ ಉದ್ಘಾಟಿಸುತ್ತಾರಂತೆ....

ರೈಲು ಈ ಸರ್ತಿಯಾದ್ರು ಓಡಾಟ ಶುರು ಮಾಡಲಿ ಅಂತ ಹಾರೈಕೆ

(ಸುದ್ದಿಯ ಚಿತ್ರ ವಿಜಯ ಕರ್ನಾಟಕದಿಂದ copy ಮಾಡಲಾಗಿದೆ )

Thursday, November 15, 2007

ರೈಲಿನ ಸಿಳ್ಳೆ ಕೇಳಲು ಕಾತರಿಸುತ್ತಿರುವ ಕಿವಿಗಳಿಗೆ...

ದೀಪಾವಳಿಗೆ ಮನೆಗೆ ಹೋಗಿದ್ದೆ.ಆಗ ಮೈಸೂರಿನಿಂದ ಪುತ್ತೂರಿಗೆ ತಲುಪಲು ಹಿಡಿದ ಸಮಯ ಮಾಮುಲಿಗಿಂತ 2 ಘಂಟೆ ಹೆಚ್ಚು.ತಡವಾಗಿದ್ದಕ್ಕೆ ಬೇಸರವಿರಲಿಲ್ಲ,ಆದರೆ ಯಾವಾಗಲು ಮೈಸೂರಿನಲ್ಲಿ ಕಣ್ಣು ಮುಚ್ಚಿದರೆ ಪುತ್ತೂರಿನ ವರೆಗೆ ಎಚ್ಚರವಿಲ್ಲದ ನಿದ್ರೆ ಆದರೆ ಅವತ್ತು ಮಾತ್ರ ಕಣ್ಣಿಗೆ ನಿದ್ರೆ ಇರಲೆ ಇಲ್ಲ ಪ್ರತಿ ಹದಿನೈದು ನಿಮಷಕ್ಕೊಮ್ಮೆ "high jump practice",ಯಾಕೋ ಅವತ್ತು bus ಬದಲು "mixer"ನಲ್ಲಿ ಕೂತ ಹಾಗಿತ್ತು.ಎನಪ್ಪಾ reason ಅಂದ್ರೆ ಬೆಂಗಳೂರನ್ನ ಮಂಗಳೂರಿಗೆ connect ಮಾಡೋ ಶಿರಾಡಿ ಘಾಟಿ "ಜೈ" ಅಂದಿದೆ,ರಸ್ತಾ ಬಂದ್.ಅದ್ದರಿಂದ ಎಲ್ಲಾ ಬಸ್ ಗಳು ಚಾರ್ಮಾಡಿ ಇಲ್ಲಾ ಮೈಸೂರಿನ ಹಾದಿ ಹಿಡಿದು ಮಂಗಳೂರನ್ನ ಸೇರುತ್ತವೆ.ಅವುಗಳೆಲ್ಲದರ ನಡುವೆ "TANKER" ಭಸ್ಮಾಸುರನ ಕಾಟ.ಯಾಕೋ ಮೊದಲೆಲ್ಲ "over nite journey" ಆಗಿದ್ದ ಮಂಗಳೂರು -ಬೆಂಗಳೂರು ಈಗ "16hours journey" ಆಗಿದೆ.
ಚರ್ಮಾಡಿಯಲ್ಲಿ trafic block ಆದರೆ "24 hours journey" ಕೂಡ ಆಗಬಹುದು.ಎರಡು ವರ್ಷದ ಹಿಂದೆಯೇ ಶಿರಾಡಿ ಘಾಟಿ ಯಾಕೋ ನನ್ನ ಕೈಲೆ ಆಗಲ್ಲ ಅಂತ ಒದ್ದಾಡೋಕೆ ಶುರು ಮಾಡಿತ್ತು ಅದು ಯಾಕೋ ನಮ್ಮ ಕಿವಿಗೆ ಬೀಳಲೇ ಇಲ್ಲ. ಈಗ "enough is enough" ಅಂತ ಶಿರಾಡಿ ಘಾಟಿ ಕೈ ಎತ್ತಿದೆ.ಆದರೂ ನಮ್ಮ ಜನ ಅದರ ಬಗ್ಗೆ ಯೋಚನೆ ಮಾಡದೆ alternate ದಾರಿ ಹುಡುಕಿ ವಯಾ ಚಾರ್ಮಾಡಿ,ವಯಾ ಮೈಸೂರು, ವಯಾ ಶಿವಮೊಗ್ಗ ಅಂತಿದಾರೆ.ಚರ್ಮಾಡಿ ಪಾಪ ಒತ್ತಡ ತಡೀಲಾರದೆ ನರಳುತ್ತಿದೆ,ಮೈಸೂರು ರಸ್ತೆಯಲ್ಲಿ ಕೆಲಸ ನಡಿಯುತ್ತಿದೆ.
ಜನಾ ಅದಕ್ಕೆಲ್ಲಾ adjust ಆಗ್ತಾ "ಒಯ್ ,ಬೆಂಗ್ಳೂರಾ ಹಾಂಗಾದ್ರೆ ನೀವು ಕೈಯಲ್ಲಿ ಒಂದು ನೀರಿನ ಬಾಟ್ಲಿ,ತಿನ್ನ್ಲಿಕ್ಕೆ ಎನಾದ್ರು ತಿಂಡಿ ಕಟ್ಟಿಕೊಂಡ್ರೆ ಒಳ್ಳೇದು ದಾರಿ ಬ್ಲಾಕ್ ಗೀಕ್ ಆದ್ರೆ ಎಂತ ಮಾಡ್ತೀರಿ..ಇವತ್ತು ರಾತ್ರಿಯ ಬಸ್ ಹಾಂಗಾರೆ ನಾಳೆ ಮಧ್ಯಾಹ್ನ ತಲುಪುವುದು ಗ್ಯಾರಂಟಿ " ಅಂತ ಪುಕ್ಕಟೆ ಸಲಹೆ ಕೊಟ್ಟು ತಮ್ಮ ಕರ್ತವ್ಯ ನಿಭಾಯಿಸಿದ ತೃಪ್ತಿಯಿಂದ ಸಾಗುತ್ತಾರೆ.
ಇದು NH 48 ಸ್ವಾಮಿ


ನಮ್ಮ ಕೇಂದ್ರ ಭೂ ಸಾರಿಗೆ ಸಚಿವರಾದ ಮಾನ್ಯ ಕೆ.ಎಚ್.ಮುನಿಯಪ್ಪನವರು ಮಂಗಳೂರು ಹೆಸರು ಕೇಳಿದ್ರೆ ಸಾಕು ಬೆವರು ಸುರಿಸುತ್ತಾ "ಎಲ್ಲಾ ಅನುದಾನ ತಮಿಳುನಾಡು ತಗೋತಿದೆ " ಅಂತ ಎಲ್ಲರ ಹತ್ರ ಹೇಳುತ್ತಾ ಬರ್ತಿದಾರೆ.ನಮ್ಮ ಶಾಸಕರು ಯಡ್ಡಿ ಪಟ್ಟಾಭೀಷೇಕದಲ್ಲಿ ಮುಳುಗಿದ್ದಾರೆ ಅಂತ ಅನ್ನಿಸ್ತಾ ಇದೆ. ಹತ್ತು ಹದಿನೈದು ವರ್ಷದ ಹಿಂದೆ ರೈಲು ಹಳಿ ಕಿತ್ತು ಇನ್ನೋಂದು ವರ್ಷದಲ್ಲಿ ಬೆಂಗಳೂರುಗೆ ರೈಲು ಅಂತ ರೈಲು ಬಿಟ್ಟಿದ್ದೆ ಬಿಟ್ಟಿದ್ದು ಪಾಪ ನಂಬಿ ಕೂತ ಜನಕ್ಕೆ ರೈಲೂ ಇಲ್ಲ ಈಗ ಓಡಾಡುವುದಕ್ಕೆ ರಸ್ತೆನೂ ಇಲ್ಲ. ನಾನು engg ಗೆ ಸೇರುವಾಗ ಯಾರೋ ಒಬ್ಬರು ನನ್ನ ಹತ್ರ "ನೀನು ಪಸ್ಟ್ ಯಿಯರ್ ಮಾತ್ರ ಬಸ್ ನಲ್ಲಿ ಹೋಗ್ಬೇಕು, ಇನ್ನೋಂದು ವರ್ಷದಲ್ಲಿ ಮೈಸೂರಿಗೆ ರೈಲು ಇರ್ತದೆ " ಅಂತ ಬಿಟ್ಟ ರೈಲು ನೆನಪಾಗ್ತಿದೆ.
ವಿಧಾನ ಸೌಧದಲ್ಲಿ ಕುಂತಿರುವ ಎಲ್ಲಾ "ಸನ್ಮಾನ್ಯ"ರಲ್ಲಿ ಎನು ವಿನಂತಿ ಅಂದರೆ ಸ್ವಲ್ಪ ಮಂಗಳೂರು -ಬೆಂಗಳೂರು ರೈಲಿನ ಬಗ್ಗೆ ರೈಲು ಬಿಡುವುದು ಕಡಿಮೆ ಮಾಡಿ ರೈಲು ಬರೋದಕ್ಕೆ ಕೆಲ್ಸ ಮಾಡಿ ಇಲ್ಲಾ ರಸ್ತೆ ಸರಿ ಮಾಡಿಸಿ ಕೊಡಿ..ಎರಡೂ ಅಗುವುದಿಲ್ಲ ಅಂತಿದ್ದರೆ ಸುಮ್ಮನಿರಿ ನಮ್ಮ ಜನ ಕೆಟ್ಟ ರಸ್ತೆಗೆ, ಬಾರದ ರೈಲಿಗೆ ಹೊಂದಿಕೊಳ್ತಾರೆ.ನ೦ತರ ಯಾರು ಸಿಕ್ಕಿದ್ರೂ ಎಲ್ಲಿ ಸಿಕ್ಕಿದ್ರೂ "ಆವತ್ತು ನಮ್ಮ ಮಂಗಳೂರಿಗೆ ಅಂತ ಕೊಟ್ಟ ಪೈಸೆಯನ್ನೆಲ್ಲಾ ದೇವೇಗೌಡ ಹಾಸನಕ್ಕೆ ತಿರ್ಗಿಸಿದ್ದಂತೆ ಮಾರಾಯ್ರೆ ..ಗೊತ್ತು೦ಟಾ" ಅ೦ತ ಶುರು ಮಾಡ್ತಾರೆ .


ನಾಡಿದ್ದು ನವೆ೦ಬರ್ 20ಕ್ಕೆ ಪುತ್ತೂರಲ್ಲಿ ರೈಲಿಗಾಗಿ ಧರಣಿಯಂತೆ ಅ೦ತಾ ಸುದ್ದಿ...year end ಅಲ್ಲಿ ರೈಲು ಶುರು ಅ೦ತಾನೂ ಇನ್ನೊ೦ದು ಸುದ್ದಿ... ರೈಲು ಶುರುವಾದ್ರೆ ಒಳ್ಳೇದು ಇಲ್ಲಾ೦ದ್ರೆ ಮಂಗಳೂರು -ಬೆಂಗಳೂರು ಪ್ರಯಾಣದ ಶಿಕ್ಷೆ ಮು೦ದುವರಿಯಲಿದೆ.
ಎನೇ ಇರಲಿ..ಯಾರಾದ್ರು ಮಂಗಳೂರು -ಬೆಂಗಳೂರು ರೈಲಿಗೆ ಕಾಯುತ್ತಿದ್ದರೆ ಕುಮಾರಣ್ಣನ style ಆಲ್ಲಿ ಹೇಳೋದಾದ್ರೆ "ಮಂಗಳೂರು -ಬೆಂಗಳೂರು ರೈಲು ಏನಿದೆ...<ದೊಡ್ದ pause>...ಅದು ಶುರುವಾಗಬೇಕು ಅ೦ತಾ ಜನ ಏನು ಬಯಸ್ತಿದಾರೆ ...<ದೊಡ್ದ pause>... ಏನು ಈ ರೈಲು ನಡೀಬೇಕು ಅ೦ತ ಎಲ್ಲರ ಆಸೆ ಇದೆ ...<ದೊಡ್ದ pause>...ಈ ಬಗ್ಗೆ ಸರಕಾರ ಕ್ರಮ ಏನು ಕೈಗೊಳ್ಳೂತ್ತದೆ ಜನ ಏನು ಕಾಯ್ತಿದಾರೆ ...<ದೊಡ್ದ pause>...ರೈಲಿಗಾಗಿ ಏನು ಜನ ಕಾಯ್ತಿದಾರೆ ...<ದೊಡ್ದ pause>...ರೈಲು ಬರ್ತದೆ ಅ೦ತ ಜನ ಏನು ಕಾಯ್ತಿದಾರೆ ...<ದೊಡ್ದ pause>... ಅವರಿಗೆಲ್ಲಾ ಒಳ್ಳೇದಾಗಲಿ" ಅಥವಾ simple ಆಗಿ ಹೇಳೋದಾದ್ರೆ all the best....

shhhh....ಕೊನೆಯಲ್ಲಿ ಒ೦ದು ಗುಟ್ಟು : ಬರ್ಮುಡಾ ತ್ರಿಕೋಣ ,UFO,ಅನ್ಯ ಗ್ರಹ ಜೀವಿಗಳೋಂದಿಗೆ ವಿಶ್ವದ ಬಿಡಿಸಲಾಗದ ಕಗ್ಗ೦ಟುಗಳು i mean "worlds unsolved Mysteries" ನಲ್ಲಿ ಮಂಗಳೂರು -ಬೆಂಗಳೂರು ರೈಲು ಶುರುವಾಗುವ ದಿನ ಹೊಸ ಸೇರ್ಪಡೆಯ೦ತೆ.

Sunday, September 16, 2007

3 ಸಾಲುಗಳು -೦೩


ಹಳೆ ಗೆಳೆಯರನ್ನ ಹುಡುಕಿಕೊ೦ಡು ದೂರದ ಊರಿಗೆ ಹೋದಾಗ
ಸಿಕ್ಕಿದ್ದು ಬೊಗಸೆ ತು೦ಬಾ ನೆನಪುಗಳು ಅವಕ್ಕೊಸ್ಕರ ಅಲ್ಲಿ ತನಕಾ ಹೋಗಬೇಕಿತ್ತಾ..
ಸ್ವಲ್ಪ ಮನದ ಕಸ ಸರಿಸಿದರೆ ಇಲ್ಲೆ ಸಿಗುತ್ತಿತ್ತು.

Thursday, September 06, 2007

3 ಸಾಲುಗಳು -೦೨



ಮುಚ್ಚಿದ ಬಾಗಿಲಿನ ಕತ್ತಲೆ ಕೋಣೆಯಲ್ಲಿ ಅವರಿಬ್ಬರು
ಪ್ರೀತಿಯ ದಿವ್ಯಬೆಳಕನ್ನ ಹುಡುಕುತ್ತಿದ್ದರೆ
ಉಳಿದವರೆಲ್ಲರಿಗೆ ಕಾಮದ ವಾಸನೆ ಬಡಿಯುತ್ತಿತ್ತು

Wednesday, September 05, 2007

3 ಸಾಲುಗಳು...


ನನ್ನ ಮನದಲ್ಲಿ ಸದಾ ಕುಣಿಯುತ್ತಿರುವ ಸದಾ ಹಾಡುತ್ತಿರುವ ನಿನಗೆ
ಯಾರಾದ್ರೂ ಬ೦ದು ನನ್ನ ಮನದರಸಿ ಯಾರು ಅ೦ತ ಕೇಳಿದರೆ
ನಾಲಿಗೆಗೆ ಬರಲು ನಿನಗೆ ಯಾಕೆ ನಾಚಿಕೆ?


ಜಗತ್ತಿನಲ್ಲಿ ಎರಡು ಅಲುಗಿನ ಕತ್ತಿಗಿ೦ತ ಹರಿತ
ಯಾವುದು ಇಲ್ಲ ಅ೦ತ ನಾನು ನ೦ಬಿದ್ದೆ
ನಿನ್ನ ಕಣ್ಣುಗಳ ನೋಡುವ ತನಕ

(ರಾಜೀವ ಬರೆದ ಹೈಕುಗಳ(ಜಪಾನಿ ಭಾಷೆಯಲ್ಲಿ ಕಿರುಗವಿತೆ)ಓದಿ ನಾನು ಬರೆಯೋ ಪ್ರಯತ್ನ ಮಾಡಿದೆ.)

Friday, August 10, 2007

ನೋಟ

ಅವಳು ಬೈಕ್ ಹಿಂದಿನ ಸೀಟ್ ನಿಂದ ಇಳಿದು ತನ್ನ ಕೂದಲನ್ನ ಸರಿಪಡಿಸಿ ಹಾಕಿದ್ದ ಟೀ-ಶರ್ಟ್ ಹಿಂಭಾಗ ಕೆಳಕ್ಕೆ ಜಗ್ಗುತ್ತಾ ನಿಂತಳು.ಅವಳೊಂದಿಗೆ ಬಂದ ಅವಳ boyfriend ಬೈಕ್ ಪಾರ್ಕ್ ಮಾಡಿ ಬಂದು ಅವಳ ಕೈ ಹಿಡಿದು ಮುನ್ನಡೆದ.ಇಬ್ಬರೂ ಮಾತನಾಡುತ್ತ coffe day ನ ಒಳಗೆ ಹೋಗಿ cold coffee orderಮಾಡಿ ಕೂತರು.ಇಬ್ಬರು ಪರಸ್ಪರ ದೃಷ್ಟಿಯುದ್ಧ ಮಾಡುತ್ತಾ ತಮ್ಮ ತಮ್ಮ ಆಫೀಸಿನ ಕೆಲಸದ ಬಗ್ಗೆ ಮಾತಾಡತೊಡಗಿದರು.ರಿಂಗುಣಿಸುತ್ತಿದ್ದ ಫೋನ್ ಹಿಡಿದು ಹೊರಗೆ ಬಂದ ಅವಳ boyfriend ಎನೋ ಗಹನವಾದ ವಿಚಾರವನ್ನ ತನ್ನ ಕೈ ಸನ್ನೆಗಳನ್ನೆಲ್ಲಾ ಬಲಸಿ ವಿವರಿಸುತ್ತಾ ಶತಪಥ ತಿರುಗುತ್ತಿದ್ದ.ಬಂದ cold coffee ಹೀರುತ್ತಾ ಆಚೀಚೆ ಕಣ್ಣ ಹಾಯಿಸುವಾಗಲೇ ತಿಳಿದಿದ್ದು ,ಎದುರಿನ ಟೇಬಲ್ ನಲ್ಲಿ ಕೂತ ಗೂಬೆಯೊಬ್ಬ ಅವಳನ್ನ ರೆಪ್ಪೆ ಮಿಟುಕಿಸದೇ ನೋಡುತ್ತಿದ್ದ. ಅವನ ನೋಟಕ್ಕೆ ಗಲಿಬಿಲಿಗೊಂಡ ಅವಳು ಅವನನ್ನ ದುರುಗುಟ್ಟಿದಳು.ಆದರೂ ಅವನು ರೆಪ್ಪೆ ಮಿಟುಕಿಸದೇ ಅವಳನ್ನ ನೋಡುತ್ತಲೇ ಇದ್ದ,ವೇಟರ್ ತಂದಿಟ್ಟ ಕಾಫಿಯನ್ನ ಕೂಡ ಗಮನಿಸದೇ.ಗಾಬರಿಗೊಂಡು ಅವಳು ತನ್ನ ಟೀ-ಶರ್ಟ್ ಮೇಲೆ ಜಗ್ಗುತ್ತಾ ಅವನು ತನ್ನನ್ನ ಈ ರೀತಿ ಯಾಕೆ ನೋಡುತ್ತಿದ್ದಾನೆ ಅಂತ ಯೋಚಿಸತೊಡಗಿದಳು.ಅವನ ಕಣ್ಣುಗಳು ಮಾತ್ರ ಅವಳನ್ನೇ ದುರುಗುಟ್ಟುತ್ತಿದ್ದವು.ಎರಡು ನಿಮಿಷ ಎನೆಲ್ಲಾ ಕಿತಾಪತಿ ಮಾಡುತ್ತಾ ಅವನ ಕಡೆ ಗಮನ ಹರಿಸುತ್ತಿಲ್ಲ ನಟಿಸಿದಳು.ಪುನಹ ಅವನೆಡೆಗೆ ನೋಡಿದರೆ ಆಗಲೂ ಅವನ ಕಣ್ಣುಗಳು ಅವಳೆಡೆಗೆ ನೆಟ್ಟಿದ್ದವು.ಅವಳು ಜರ್ಕಿನ್ ಧರಿಸಿ ಮೈ ಮಡಿಚಿ ಕೂತಳು,ವಿಧ ವಿಧ ಭಂಗಿ try ಮಾಡಿದಳು.
ಅವನ ಕಣ್ಣುಗಳು ಮಾತ್ರ ಅವಳನ್ನೇ ಸೆರೆ ಹಿಡಿಯುತ್ತಿದ್ದವು.
ಬೇಜಾರು ಬಂದು ಆಕೆ ತನ್ನ ಕುರ್ಚಿಯನ್ನು ತಿರುಗಿಸಿ ಅವನಿಗೆ ಬೆನ್ನು ಕೊಟ್ಟು TV ನೋಡುತ್ತಾ ಕೂತಳು.TV ಕಡೆ ಯಾಕೋ ಮನಸ್ಸಿರಲಿಲ್ಲ.ಅವನೆಡೆಗೆ ಕಳ್ಳನೋಟ ಬೀರಿದಳು.ಅವನ ಕಣ್ಣುಗಳು ಮಾತ್ರ ಅವಳನ್ನೇ ಸೆರೆ ಹಿಡಿಯುತ್ತಿದ್ದವು.ಅವಳ ಸಹನೆ ಮೀರಿತು, ಇಪ್ಪತ್ತು ನಿಮಿಷ ಅವನ ಕಣ್ಣೋಟ ಸಹಿಸಿದ್ದಳು.ಎದ್ದು ಹೋಗಿ ಅವನ ಕಪಾಳಕ್ಕೆ ಬಿಗಿದು "ಅಕ್ಕ ತಂಗೀರು ಯಾರು ಇಲ್ವಾ?" ಅಂತ ಕೇಳಿ ಬುಸುಗುಟ್ಟುತ್ತಾ ಮುನ್ನಡೆದಳು.ಫೋನ್ ಕರೆ ಮುಗಿಸಿ ಅವಳೆಡೆಗೆ ಬರುತ್ತಿದ್ದ boyfriend ಹತ್ರ ರೋಡ್ ರೋಮಿಯೋಗಳನ್ನ ಬೈಯುತ್ತಾ,coffee day ಬಾಗಿಲು ದಬ್ಬಿ ಹೊರನಡೆದಳು.
ಅವಳು ಹೊಡೆದ ರಭಸಕ್ಕೆ ಅವನ ಎರಡು ಕಣ್ಣುಗಳ ಜಾಗದಲ್ಲಿ ಜೋಡಿಸಿದ್ದ ಗಾಜಿನ ಕಣ್ಣುಗಳಲ್ಲೊಂದು ಕೆಳಗೆ ಬಿದ್ದಿತ್ತು.ಅವನು ಕೆಳಗೆ ಬಗ್ಗಿ ಅದನ್ನು ಹುಡುಕುವ ಪ್ರಯತ್ನ ಮಾಡುತ್ತಿದ್ದ.

Wednesday, August 01, 2007

ಮಳೆ ...

ಹೊರಗು ಮಳೆ ಸುರಿಯುತ್ತಿದೆ
ಮಳೆಯಿಂದ ಇಳೆ ಓದ್ದೆ
ಮನಸು ಓದ್ದೆ ಓದ್ದೆ
ಮಳೆ ನೀರು ನೆಲ ಸೇರಿ ಹೊರಗೆಲ್ಲ ಕೆಸರು..
ಹಳೆ ನೆನಪುಗಳು ಕದಡಿ ಮನವೆಲ್ಲ ಕೆಸರು
ಧೋ ಎಂದು ಮಳೆ ಸುರಿದು ಕೆಸರು ಕೊಚ್ಚಿ ಹೋಗಲಿ
ನೆನಪುಗಳು ಕೊಚ್ಚಿ ಹೋಗಲಿ

ಕೂತು ಕಾಯುತ್ತಿದ್ದೇನೆ
ಹಾಳಾದ್ದು ನಿನ್ನ ಕಣ್ಣುಗಳು ಯಾವುದು ಕೊಚ್ಚಿ ಹೋಗದಂತೆ ತಡಿಯುತ್ತಿವೆ
ಯಾಕೆ ಬೇಕಿತ್ತು ನಿನ್ನ ಕಣ್ಣುಗಳ ಸಹವಾಸ
ಮೊದಲು ನಾನು ಸುಖಿಯಾಗಿದ್ದೆ
ನೆಮ್ಮದಿ ಇತ್ತು ಬಾಳಲ್ಲಿ
ಕಣ್ತುಂಬ ನಿದ್ದೆ ಇತ್ತು

ಮಳೆ ಬಂದು ನೆನಪುಗಳ ಕದಡಿ ಹೊಗಿದೆ,
ಧೋ ಎಂದು ಮಳೆ ಸುರಿದು ಎಲ್ಲಾ ಕರಗಿ ಹೋಗಬಾರದೆ..

(ಹೊರಗೆ ನೋಡಿದಾಗ ಮಳೆ ಸುರಿಯುತಿತ್ತು....ಮನಸಿಗೆ ಬಂದಿದ್ದನ್ನ ಬಂದ ಹಾಗೆ ಬರೆದೆ)

Monday, July 16, 2007

ಮದುವೆ ಮನೆ..ಬನ್ಸ್ ಭಾಜಿ...ಕ್ರೈಂ ಡೈರಿ....

18 june 2007
"ಯಜಮಾನ್ರೆ ನಮ್ಮ ಮಾವನ ಮನೆಯಲ್ಲಿ double function ಇದೆ. ಜುಲೈ 9 ರಜೆ ಹಾಕಿ ಬಂದು ಬಿಡಿ..ಇನ್ನೂ ಹದಿನೈದು ದಿನ ಇದೆ ರಜಾ apply ಮಾಡಿಬಿಡಿ"
"ಅಲ್ಲಾ..ಅದು ರೋಹಿತಣ್ಣ..ಕೆಲ್ಸ ತುಂಬಾ"
"ಬನ್ನಿ ಸಾರ್ ..ನಿಮ್ಮ ಅತ್ತಿಗೆ ತಂಗಿಯರ ಮದುವೆ ಒಂದು ಜುಲೈ8ಕ್ಕೆ,ಇನ್ನೊಂದು 9ಕ್ಕೆ,ಬರದಿದ್ದರೆ ನಿಮಗೆ ಕಷ್ಟ..ನೋಡಿ"
"ಅಲ್ಲಾ ...ಕೆಲಸ..."
"ಕೆಲಸಕ್ಕೇನು ಸಾರ್ ..ಇಲ್ಲಿ ಬನ್ನಿ ಮದುವೆ ಮನೆಯಲ್ಲಿ ಬೇಕಾದಷ್ಟು ಕೆಲಸ ಇದೆ,ಪಂಕ್ತಿಯಲ್ಲಿ ಬಡಿಸೋದು,cameraದವನಿಗೆ ಹೇಳಿಲ್ಲಾ ನೀವು ಬಂದ್ರೆ ಫೊಟೋ ತೆಗೀಬಹುದು ..official cameraman ಆಗಿ...ಬನ್ನಿ ಸಾರ್ ....ನಿಮಗೆ ಸ್ವಲ್ಪ ಉತ್ತರ ಕನ್ನಡದ ಹಸಿರು ತೋರಿಸೋಣ"
"ಆಲ್ಲೇನಿದೆ..ಕಾಡು ಬೆಟ್ಟ ಗುಡ್ಡ ಗದ್ದೆ, M-80 ,ದಕ್ಷಿಣ ಕನ್ನಡದ ಮಲೆನಾಡಿನವರಿಗೆ ನೀವೇನು ಹಸಿರು ತೋರಿಸೋದು ,ಅದೇ ಹಸಿರು ,ಅದೇ ಪಾಚಿ,ಅದೇ ಜುಲೈ ತಿಂಗಳ ಮಳೆ ಭೋರೋ ಅಂತ ಸುರಿತಾ ಇರೊತ್ತೆ."

"ಅಲ್ಲಾ ನಮಗೆ ಗೊತ್ತು ರೀ..ನೀವು carrot ಇಲ್ಲದೇ ಬರೊಲ್ಲಾ ಅಂತ"
"carrot ಬೇಡ...ಬೀಟ್ರೂಟು ಬೇಡಾ"
"ಗುರುವೇ ..ನೋಡಿ ರಜೆ ಹಾಕಿ ಬಂದ್ರೆ ...."



ಈ ರೀತಿ ನನಗೆ ರೋಹಿತನ ಕಡೆಯಿಂದ invitation ಬಂದಿದ್ದು.ಕಳೆದ ನಾಲ್ಕುವರೆ ವರ್ಷದಿಂದ ದುಬೈಯಲ್ಲಿ ಇರುವ ಅಣ್ಣಾವ್ರು ..ಬನ್ನಿ ಅಂತಿದಾರೆ ಹೋಗದೇ ಇದ್ರೆ ಪಾಪ ಬೇಜಾರು ಮಾಡ್ಕೊತಾರೆ ಅಂತ ಒಂದು ದಿನ ರಜಾ ಹಾಕಿ ಶಿರಸಿಗೆ ಹೊರಡೋ plan ಹಾಕಿದೆ.

ಮ್ ಮ್ ಬನ್ಸ್..

8,9 july 2007
"ಇವ ಸನತ್ ಹೇಳಿ,ಪುತ್ತೂರಿಲಿ ನಂಗೆಲ್ಲ ಒಂದೇ ವಠಾರಲ್ಲಿ ಇದ್ದದ್ದು. ಈಗ ಮೈಸೂರಿಲಿ soft engg.ಮದುವೆಗೆ ಬಾ ನಿಂಗೆ ಸ್ವಲ್ಪ ಉತ್ತರಕನ್ನಡದ ಸೌಂದರ್ಯ ತೋರಿಸ್ತೆ ಹೇಳಿದೆ ಅದಕ್ಕಾಗಿ 'ಪಕ್ಷಿ ವೀಕ್ಷಣೆ'ಗೆ ಬಯಿಂದ."( ಈ ರೀತಿ ನನ್ನನ್ನ ಎಲ್ಲರಿಗೂ ಪರಿಚಯಿಸಿದಕ್ಕೆ ರೋಹಿತಣ್ಣಂಗೆ ಅನಂತಾನಂತ ಧನ್ಯವಾದಗಳು.
ಸ್ವಗತ: ಮೈಸೂರಿಂದ ನೀನು ಕರೆದೆ ಅಂತ ಬಂದ್ರೆ ಈ ಸನ್ಮಾನನ..ಗುರು ಯಾವಾಗಾದ್ರು ನನ್ನ ಕೈಗೆ ಸರಿಯಾಗಿ ಸಿಕ್ಕು ...ನಿನ್ನ ನೋಡ್ಕೋಳ್ತೀನಿ..)
ಪುಣ್ಯಾತ್ಮ ಯಾವಾಗ "ಪಕ್ಷಿ ವೀಕ್ಷಣೆಗೆ ಬಯಿಂದ" ಅಂತ ಉಲಿದನೋ ಅದೇ ಕೊನೆ ಆ ಶಬ್ಧ ಕೇಳೀದನೇ ಹೊರತು "ಪಕ್ಷಿ ವೀಕ್ಷಣೆ" ಆಗಲೇ ಇಲ್ಲ. ಅವನನ್ನ ಕೇಳಿಬಿಟ್ಟೆ
"ಗುರುಗಳೇ ..ಪಕ್ಷಿ ವೀಕ್ಷಣೆಗೆ ಬಯಿಂದ..ಪಕ್ಷಿ ವೀಕ್ಷಣೆಗೆ ಬಯಿಂದ...ಅಂತೀರಲ್ಲಾ ಇಲ್ಲಿ ಪಕ್ಷಿ ತೋರಿಸಿ ...ಬರೀ ಮುದಿಹದ್ದು ಗಳೇ ಇರುವುದು", ಆದಕ್ಕೆ ಉತ್ತರ ಬಂದಿದ್ದು,
"sorry..ಸಾರ್ ...ಅತಿವೃಷ್ಟಿಯಿಂದ ಪಕ್ಷಿಗಳು ಗೂಡಿನಿಂದ ಹೊರಗೆ ಬರಲಿಲ್ಲ ಅಂತ ಕಾಣೋತ್ತೆ."

ನಾನು ಮೊದಲು ಯಾವಾಗಲೋ "ಓ...ಮನಸೇ"ಯಲ್ಲಿ ಉತ್ತರ ಕನ್ನಡದಲ್ಲಿ ಕೂಸುಗಳ ಬರದ ಬಗ್ಗೆ ಓದಿದ್ದೆ.ಆದರೆ ಪರಿಸ್ಥಿತಿಯ ಗಂಭೀರತೆ ಅರ್ಥ ಆಗಿದ್ದೆ ಮೊನ್ನೆ ಶಿರಸಿಯಲ್ಲಿ.ಯಾಕೋ ಮಠದ ವತಿಯಿಂದ ಪ್ರತಿವರ್ಷ ವಧು-ವರ ಸಮ್ಮೇಳನ ಮಾಡಿದ್ರೆ ಯುವಜನತೆಗೆ ಬಹಳ ಉಪಕಾರ ವಾಗಬಹುದು ಅಂತ ರೋಹಿತನ ಹತ್ರ ಪ್ರಸ್ತಾಪ ಇಟ್ಟೆ. "ಸಾಕು ಸುಮ್ಮನಿರೋ ರಾಜ..ಬಿಟ್ಟಿ ಏಟುಗಳು ತಿನ್ನೋ ಪರಿಸ್ಥಿತಿ ಬರಬಹುದು ನಿನ್ನ ಈ idea ಯಾರಿಗೂ ಹೇಳ್ಬೇಡ"ಅಂದ. ಯಾಕೋ ಈ ವಿಷಯದಲ್ಲಿ ಯೋಚನೆ ಮಾಡಬೇಕಾದವರು ಸಾಕಷ್ಟು ಯೋಚನೆ ಮಾಡುತ್ತ್ತಿಲ್ಲಾ ಅನ್ನಿಸುತ್ತಿದೆ .
ಎಲ್ಲದರ ನಡುವೆ ಶಿರಸಿ ಪೇಟೆಯಲ್ಲಿ ನಿಂತು ಹಿಂಗೆ ಫೊಟೋ ತೆಗಿತಾ ಇದ್ದೆ,ಒಬ್ಬ ಮಹಾನುಭಾವರು ಬಂದು "ಸಾರ್ ನೀವು ರಿಪೋರ್ಟರಾ? "ಅಂತ ಕೇಳಿದ್ರು,ನಾನು "ಹೌದು, ನಾನು ಕ್ರೈಂ ಡೈರಿ ರಿಪೋರ್ಟರ್,ನಿಮ್ಮದು ಒಂದು ಫೊಟೋ ತಗೋಳ್ಳಲಾ? ಒಳ್ಳೆ story ಬರೀತೀನಿ" ಅಂತ reply ಮಾಡಲಿದ್ದವನು ಹಾಗೆ reply ಮಾಡಿದ್ರೆ ಮಾರನೇ ದಿನ "ನಕಲಿ ಕ್ರೈಂ ಡೈರಿ ರಿಪೋರ್ಟರ್ ಆಗಿ ಏಟು ತಿಂದ ಭೂಪ" ಅನ್ನೋ ಪೇಪರ್ headline ಗ್ಯಾರಂಟಿ ಅಂದುಕೊಂಡು ಬಿಟ್ಟಿ smile ಕೊಟ್ಟು ಮುಂದೆ ನಡೆದೆ.
ಮದುವೆ ಮನೆಲಿ ಒಬ್ಬರಂತು ಬಂದು "ಅಪ್ಪಿ, ಯಾವ ಸ್ಟುಡಿಯೋನೋ ನಿಂದು,ಮುಂದಿನ ತಿಂಗಳು ಎಮ್ಮನೇಲಿ...."ಅಂತ photographyಗೆ advance booking ಮಾಡೋ ಪ್ರಯತ್ನ ಮಾಡಿದ್ರು.
ಅದಕ್ಕೆ ನಾನು "ಆನು ಮೈಸೂರಿಂದ ಬಯಿಂದೆ ,special ಆಗಿ ಕರಸಿದ್ದೋ .. " ಅಂತ ಹೇಳಿ ತಪ್ಪಿಸಿಕೊಂಡೆ.ಆದ್ರೆ ಯಾಕೋ company ಕೊಡೋ ಸಂಬಳ ನೋಡಿದ್ರೆ ಯಾಕೋ ಮದುವೆ/ಮುಂಜಿಗಳಲ್ಲಿ ಬಡಿಸುವ/photo ತೆಗೆಯುವ contract ತಗೋಂಡ್ರೆ ಯಾಕೋ ಲಾಭ ಅನ್ನಿಸುತ್ತಿದೆ.
ಅಂದ ಹಾಗೆ importent ವಿಷಯ ಮರೆತೆ ,ನಾಣಿಕಟ್ಟದಲ್ಲಿ ಸುರಿವ ಮಳೆಯಲ್ಲಿ ಕೂತು ಬಿಸಿ ಬಿಸಿ ಬನ್ಸ್-ಭಾಜಿ ಮತ್ತು ಸೇವ್ ಭಾಜಿ ತಿಂದದ್ದು.ಹೊರಗಡೆ ಧಾರಾಕಾರ ಮಳೆ,ಮೈ ಎಲ್ಲ ಚಳಿಗೆ ಮರಗಟ್ಟಿದಂತಾಗಿತ್ತು..ಆ ಹೊತ್ತಿಗೆ ಸರಿಯಾಗಿ ನಿಮಗೆ ಬಿಸಿ ಬಿಸಿ ಬನ್ಸ್ ಸಿಕ್ಕಿದ್ರೆ ಎನು ಆನಂದ ..ಅದೇ ಆನಂದ ನಮಗೂ ಆಗಿದ್ದು.
ಥಾಂಕ್ಯು ಅತ್ತಿಗೆ... ಆ ಹೋಟೆಲ್ ಗೆ ಹೋಗಿ ತಿಂಡಿ ತಿನ್ನಿ ಅಂತ ನಮ್ಮನ್ನ (ನಾನು + ರೋಹಿತ)ಓಡಿಸಿದಕ್ಕೆ...i mean ನೀವು ಹೊಲಿಯೋಕೆ ಕೊಟ್ಟ ಬಟ್ಟೆ ತಗೋಂಡು ಬರೋಕೆ ಹೋಗಿ,ಬರುವಾಗ ದಾರಿಯಲ್ಲಿ ಬೇಕಿದ್ರೆ ಬನ್ಸ್-ಭಾಜಿ ತಿಂದುಕೊಂಡು ಬನ್ನಿ ಅಂತ ಓಡಿಸಿದಕ್ಕೆ.
ಇದನ್ನ ಬರಿಯೋಣ ಅಂತ ಯಾಕೋ ಅನ್ನಿಸಿತು ಬರೆದೆ...
ಬರಿತಾ ಇರಬೇಕಾದ್ರೆ ರಾಜೀವ ping ಮಾಡಿದ್ರು ಅವ್ರು ಮೊನ್ನೆ ತಮ್ಮ ಪತ್ನಿ ಜೊತೆ ಜಪಾನ್ ನ disney world ಗೆ ಹೋದಾಗ ಭೂಕಂಪ ಆಯಿತಂತೆ.ಅದಕ್ಕೆ ನಾನಂದೆ ಗುರುವೇ "ಜೀವನದಲ್ಲಿ ಹೆಂಡತಿಗಿಂತ ದೊಡ್ಡ ಭೂಕಂಪ ಇಲ್ಲ" ಆಂತ ಬಲ್ಲವರು ಹೇಳಿದ್ದಾರೆ.ಎರಡೆರಡು ಭೂಕಂಪ ಸಹಿಸಿಕೊಂಡ ನೀವು gr8 ಅಂತ.

"ದಾಂಪತ್ಯ ಜೀವನ ಅಂದ್ರೆ ಎನು?ಮದುವೆ ಅಂದ್ರೆ ಅನುರಾಗದ ಅನುಬಂಧ ನಾ?ಅಲ್ಲಾ..world war 3ನಾ ?" ಅಂತ ಪ್ರಶ್ನೆ ಕೇಳಿದಾಗ ರೋಹಿತ್ ಉತ್ತರವನ್ನ ಹೀಗೆ ಕೆಳಗಿನ ಫೋಟೋದಲ್ಲಿ ಸೆರೆ ಹಿಡಿದೆ. "ಭಗವಂತ ಎನಪ್ಪಾ ನಿನ್ನ ಲೀಲೆ..." ಅಂತ ಹೇಳಿದಾಂಗೆ ಇತ್ತು. ನನಗೆ ಸರಿಯಾಗಿ ಎನು ಅಂದ್ರು ಅಂತ ಗೊತಾಗ್ಲಿಲ್ಲ. ಗೊತ್ತಾದ್ರೆ ನಂಗೂ ತಿಳಿಸಿ....

Tuesday, July 10, 2007

ಉತ್ತರಕನ್ನಡ ಜಿಲ್ಲೆಯು..ಶಿರಸಿ ಪೇಟೆಯು...ಅದರ ಜೀವನಾಡಿಯು

ಶಿರಸಿ - ನನ್ನ ಕಣ್ಣಿಗೆ ಕಂಡಂತೆ

ಕಳೆದ ವಾರಾಂತ್ಯ ಉತ್ತರಕನ್ನಡದ ಶಿರಸಿಗೆ ಹೋಗಿದ್ದೆ.ಶಿರಸಿ ಕರ್ನಾಟಕದ ಆಡಿಕೆ ಕೇಂದ್ರಗಳಲ್ಲಿ ಒಂದು.ಇಲ್ಲಿಯ ಜನರದ್ದು ಅಡಿಕೆ centered economy.ಅಡಿಕೆಗೆ ರೇಟ್ ಇದ್ರೆ ವ್ಯಾಪಾರ ವಹಿವಾಟು ಜೋರು,ಅದೇ ಅಡಿಕೆಗೆ ರೇಟ್ ಕಮ್ಮಿಅದ್ರೆ ವ್ಯಾಪಾರ ವಹಿವಾಟು ಥಂಡಾ. ಅಂದ ಹಾಗೆ ಉತ್ತರ ಪ್ರದೇಶದ ಮೊರಾದಬಾದ್ ಜಿಲ್ಲೆಯಲ್ಲಿ ಒಂದು ಸಿರ್ಸಿ ಅಂತ ನಗರ ಇದೆ.ಶಿರಸಿ ಸುತ್ತ ಹಸಿರನ್ನು ಹೊತ್ತು ನಿಂತಿರುವ ತಾಲೂಕು ಕೇಂದ್ರ. 'ಅಚ್ಚ ಕನ್ನಡ'ದಲ್ಲಿ ಹೇಳೋದಾದ್ರೆ ಮಲೆನಾಡಲ್ಲಿರುವ one of the sleepy town.ವರ್ಷದಲ್ಲಿ ಆರು ತಿಂಗಳು ಧಾರಾಕಾರ ಮಳೆ ಸುರಿದು,ಇನ್ನಾರು ತಿಂಗಳನ್ನ ಚಳಿಗಾಲ ಮತ್ತು ಬೇಸಿಗೆ ಹಂಚಿಕೊಂಡಿವೆ.ಮಲೆನಾಡಿನಲ್ಲಿ ಹೆದ್ದಾರಿಗಳಿಗಿಂತ ದೂರದಲ್ಲಿ ಗುಡ್ಡ ಕಾಡುಗಳ ನಡುವೆ ಇರುವ 5-6 ಮನೆಗಳಿರುವ ಹಳ್ಳಿಗಳೇ ಇರುವುದು.(ಈ ಮನೆ/ಹಳ್ಳಿಗಳಿಗೆ ಹೋಗುವುದೇ ಒಂದು ಟ್ರೆಕ್ಕಿಂಗ್ ಅಂತ ಬೆಂಗಳೂರಿಗರ ಹೇಳಿಕೆ.)ಆದರೆ ಇದೇ ಹಳ್ಳಿಗಳನ್ನ ,ಕಾಡು ಮೇಡು ,ಗುಡ್ಡ ಗದ್ದೆಗಳನ್ನ ಪೇಟೆಗೆ ಸಂಪರ್ಕಿಸುವ ಜೀವನಾಡಿಯೊಂದಿದೆ...ಆ ಜೀವನಾಡಿಯ ಹೆಸರೇ "ಬಜಾಜ್ M-80".

ಮನೆಗೆ ಒಂದು ಗಾಡಿ ಬೇಕು ಅಂದರೆ ಅದಕ್ಕೆ ಕೆಲವು criterion ಗಳು specific ಆಗಿ ಇರಬೇಕಾಗುತ್ತದೆ.
ತೀರಾ software ಭಾಷೆಯಲ್ಲಿ ಹೇಳೋದಾದ್ರೆ ಕೆಲವು requirement ಗಳು ಇರುತ್ತವೆ.
" ಹಿಂಡಿ,ಬೈಹುಲ್ಲು ,ಗ್ಯಾಸ್ ತರೊಕೆ ..., ಸೊಸೈಟಿಗೆ ಅಡಿಕೆ ,ಹಾಲು ತಗೊಂಡ್ ಹೊಪಲೆ..."
.. ಹೀಗೆ ಪೇಟೆಗೆ ಅಡಿಕೆ ಚೀಲ ತಗೊಂಡು ಹೋಗೋಕೆ, ಹಾಲು ಸೊಸೈಟಿ/KMFಗೆ ಹಾಲು ಒಯ್ಯಲಿಕ್ಕೆ...,ಮನೆಗೆ ದಿನಸಿ ,ಅಡುಗೆ ಗ್ಯಾಸ್ ತರುವುದಕ್ಕೆ, ಹಿಂಡಿ ತರುವುದಕ್ಕೆ.., ಹೀಗೆ ಎಲ್ಲಾದಕ್ಕೂ ಬೇಕಾದದ್ದು ಗಾಡಿ,ಕಲ್ಲು ಮಣ್ಣು,ಗದ್ದೆ ಗುಡ್ಡದ ದಾರಿಯಲ್ಲಿ ಸಂಚರಿಸಿದರೂ spare partಗಳು ಸಡಿಲಗೊಳ್ಳದಿರೋ ಗಾಡಿ,
ಎಲ್ಲ ಬೇಡಿಕೆಗಳನ್ನು ತೀರಿಸುವುದು ಒಂದೇ ಗಾಡಿ ..."ಬಜಾಜ್ M-80",ಒಂಥರಾ ಮಲೆನಾಡಿಗೆ ಹೇಳಿಮಾಡಿಸಿದ ಗಾಡಿ.
ಬೇಕಿದ್ರೆ ಶಿರಸಿಗೆ ಹೋಗಿ ಅಥವಾ ಉತ್ತರ ಕನ್ನಡದ ಯಾವುದೇ ಪೇಟೆಗೆ ಹೋಗಿ ನಿಂತ್ರೆ ನಿಮಗೆ minimum ನಿಮಿಷಕ್ಕೊಂದು "ಬಜಾಜ್ M-80" ಕಾಣಸಿಗುತ್ತದೆ. ಈಗ ಬೇರೆ ಬೇರೆ ಉತ್ತಮ ಗಾಡಿಗಳು ಬಂದರೂ M-80 ಮಾತ್ರ ಅದರ ರಾಜ ಮರ್ಯಾದೆಯ ಸ್ಥಾನ ಬಿಟ್ಟುಕೊಟ್ಟಿಲ್ಲ.
ನಾನು ಹೀಗೆ ಮಾತನಾಡುತ್ತ ಗಾಡಿಗಳ ಬಗ್ಗೆ ಕೇಳಿದಾಗ "ತಮ್ಮಾ..ಆನು 12 ವರ್ಷದಿಂದ ಈ ಗಾಡಿ ಹೊಡೀತಾ ಇದ್ದೆ.. ಎನೂ ತೊಂದ್ರೆ ಕೊಟ್ಟಿದಿಲ್ಲೆ.." ಅಂತಾ M-80 ಹೊಗಳುವ ಹಿರಿಯರು ಬಹಳ ಜನ ಸಿಕ್ಕಿದರು.
ಯಾಕೋ ರೋಹಿತನಹತ್ರ ಕೇಳಿದರೆ "ಯಜಮಾನ್ರೇ..ಈ world ಅಲ್ಲಿ highest number of M-80 ಇರೋದೇ ಉತ್ತರ ಕನ್ನಡದಲ್ಲಿ, ವಿಶ್ವದಲ್ಲಿ ಅತ್ಯಂತ ಹೆಚ್ಚು M-80 ಇರೋ ಗಿನ್ನಿಸ್ ರೆಕಾರ್ಡ್ ನಮ್ಮದೇ .ಬೇಕಾದ್ರೆ ನೋಡಿ ಬೆಂಗಳೂರಿಗೆ ಇಲ್ಲಾಂದ್ರೆ ಉತ್ತರ ಕನ್ನಡದ ಹೊರಗೆ ಬೇರೆ ಯಾವುದಾದರು ಊರಿಗೆ ಹೋಗಿ ಅಲ್ಲಿ ಎಲ್ಲಾದ್ರು M-80 ಕಂಡ್ರೆ ಅದರ number ನೋಡಿ KA-31 ..ಅಂತಾ ಸ್ಟಾರ್ಟ್ ಆಗೊತ್ತೆ" ಅಂತ ಹೇಳಿದ.
ಅವಾಗ ನಾನು ಯೋಚನೆಗೆ ಬಿದ್ದೆ, ಬಜಾಜ್ ಕಂಪನಿಯವರು ಬೇರೆ ಕಡೆ M-80 manufacture ಯಾಕೆ ಮಾಡಬೇಕು.ಸುಮ್ನೆ ಶಿರಸಿಲೋ ಇಲ್ಲಾಂದ್ರೆ ಉತ್ತರಕನ್ನಡದಲ್ಲಿ ಎಲ್ಲಾದ್ರು M-80 manufacture ಮಾಡಿದ್ರೆ ಅವರ transport cost ಕಮ್ಮಿ ಆಗೊಲ್ವ. ಭಾರತದಲ್ಲಿ ತಯಾರಾಗೋ 40% M-80 ಉತ್ತರಕನ್ನಡದಲ್ಲಿ ಸೇಲ್ ಆದರೂ ಸಾಕು ತಾನೇ ಅವರ ಖರ್ಚು ಕಮ್ಮಿ ಮಾಡೋಕೆ .ಬೇರೆ ಕಡೆಯಿಂದ order ಬಂದ್ರೆ ಇಲ್ಲಿಂದ ಕಳಿಸಿದ್ರಾಯಿತು ಅಂತ ಯೋಚಿಸುತ್ತಿದ್ದೆ. ಆಗ ನನಗೆ ಅನ್ನಿಸಿತು ನಾವು software ಜನ ಯಾವುದಕ್ಕೆ ಬೇಕೋ ಅದಕ್ಕೆ ಬಿಟ್ಟು ಎಲ್ಲಾದಕ್ಕೂ logic ಹಾಕ್ತಾರೆ.


ಆದ್ರೆ ಎನೇ ಹೇಳಿ ಶಿರಸಿಯ ಜನರನ್ನು ಮಾತ್ರ ಮೆಚ್ಚಬೇಕು.ರಸ್ತೆ ಇರುವುದು ಪಾದಾಚಾರಿಗಳ ಓಡಾಟಕ್ಕೆ ಅಂತ ಅವರು ದೇಶಕ್ಕೆ ತೋರಿಸಿಕೊಟ್ಟಿದ್ದಾರೆ.
ಯಾಕೋ ಶಿರಸಿಯಲ್ಲಿ drive ಮಾಡಬೇಕಿದ್ರೆ ಜನ ರಸ್ತೆಯಲ್ಲಿ ಇದ್ದಾರೆ ಅಂತ ನೀವು ಹಾರ್ನ್ ಬಾರಿಸಿದ್ರೋ ಅದು ನಿಮ್ಮ ಗ್ರಹಚಾರ . ನೀವು ನಿಂತು ಹತ್ತು ಹನ್ನೆರಡು ಹಾರ್ನ್ ಬಾರಿಸುತ್ತಿದ್ದರೂ ಜನ ಮಾತ್ರ ಎನೂ ಅಗಿಲ್ಲ ಅನ್ನುವ ಹಾಗೆ"ಅಲ್ದಾ ಭಾವ, ಮೊನ್ನೆ ಯಂತಾ ಮಳೆ.." ಅಂತಾ ತಮ್ಮ ಪಟ್ಟಾಂಗ ಮುಂದುವರಿಸುತ್ತಾ ತಮ್ಮ ಪಾಡಿಗೆ ಎನೂ ಅಗಿಲ್ಲ ಅನ್ನೋ ತರಹ ಮುನ್ನಡೆಯುತ್ತಾರೆ.
ಶಿರಸಿ ಗೆ ಕಾಲಿಟ್ಟ ಕ್ಷಣದಿಂದ ಯಾಕೋ ಪುತ್ತೂರು ನೆನಪಾಗ ತೊಡಗಿತ್ತು.ಧಾರಾಕಾರವಾಗಿ ಸುರಿಯುತ್ತಿರುವ ಮಳೆ, ರಸ್ತೆಗೆ ಆಂಟಿಕೊಂದಿರುವ ಅಂಗಡಿಗಳು (correct ಆಗಿ ಹೇಳೂದಾದ್ರೆ ಅಂಗಡಿಗಳಿಗೆ ಅಂಟಿಕೊಂಡಿರುವ ಕಿರಿದಾದ ರಸ್ತೆಗಳು), ಆ ಪೇಟೆಯಲ್ಲಿ ಗಾಡಿ ಓಡಿಸಲು ಮಾಡಬೇಕಾದ ಹೋರಾಟಗಳು...
ಎನೋಪ್ಪಾ ಕುಮಾರಣ್ಣ ಮೊನ್ನೆ ಶಿರಸಿಗೆ ಬಂದಿದ್ದಾಗ ಶಿರಸಿ ಜಿಲ್ಲೆ ಮಾಡುವುದಾಗಿ ಹೇಳಿದ್ದಾರಂತೆ. ಸುಮ್ನೆ ಜಿಲ್ಲೆ ಮಾಡೋ ಬದಲು ಜನರಿಗೆ ಅಲ್ಲಿ ಎನು ಮೂಲಭೂತ ಅಗತ್ಯಗಳು ಬೇಕಾಗಿದೆಯೋ ಅದು ಮಾಡಿಕೋಡಿ ಸಾಕು.
ನೀವು ಜಿಲ್ಲೆ ಮಾಡಿ ಮಾಡದೇ ಇರಿ ..ಅದರೆ ಉತ್ತರ ಕನ್ನಡ ಜಿಲ್ಲೆಯಲ್ಲಿ ..ಶಿರಸಿ ಪೇಟೆಯಲ್ಲಿ ..M-80 ಗಳು ಮಾತ್ರ ತಮ್ಮ ಪಾಡಿಗೆ ತಾವು ಓಡಾಡಿಕೊಂಡಿರುತ್ತವೆ,ರಸ್ತೆಯಲ್ಲಿ ನಡೆಯುತ್ತಿರುವ ಪಾದಾಚಾರಿಗಳು ಅವಕ್ಕೆ ದಾರಿ ಕೊಟ್ರೂ..ಕೊಡದಿದ್ದರೂ...

Friday, June 22, 2007

ಮುಂಗಾರುಮಳೆಯೂ..... ಯಕ್ಷಗಾನವೂ...


ನಿನ್ನೆ ನನ್ನ ಗೆಳೆಯನೊಂದಿಗೆ ಮಾತನಾಡುತ್ತಾ ಮುಂಗಾರುಮಳೆ ಯಕ್ಷಗಾನದ ಬಗ್ಗೆ ತಿಳಿಯಿತು.
ಯಾವ ಪ್ರಸಂಗಕರ್ತ ಇಷ್ಟು ಕೆಳಗಿಳಿದು ಸೂಪರ್ ಹಿಟ್ ಚಿತ್ರವನ್ನ ಯಕ್ಷಗಾನಕ್ಕೆ ಅಳವಡಿಸಬಹುದು ಎಂದು ನಾನು ಅಂದುಕೊಂಡಿದ್ದೆ.ಆಮೇಲೆ ಆ ಪ್ರಸಂಗಕರ್ತ ದೇವದಾಸ್ ಈಶ್ವರಮಂಗಲ ಅಂತ ಮೇಲೆ ಯಾವುದೇ ಸಂದೇಹ ಉಳಿಯಲಿಲ್ಲ,ಆ ಮನುಷ್ಯ ಮಲೆಯಾಳಿ ಸುಂದರಿಯರ ಯಾವುದಾದರೂ ಸೂಪರ್ ಹಿಟ್ "ದೇವರ ಚಿತ್ರ" ಗಳನ್ನ ಯಕ್ಷಗಾನಕ್ಕೆ ಆಳವಡಿಸದಿರಲಿ ಎಂಬುದೇ ದೇವರಲ್ಲಿ ನನ್ನ ಪ್ರಾರ್ಥನೆ .

ಈ ದೇವದಾಸ್ ಈಶ್ವರಮಂಗಲ ಅವರು ಹಿಂದೆ ಆಪ್ತಮಿತ್ರ ದ ಕಥೆಯನ್ನ ಬಳಸಿ "ನಾಗವಲ್ಲಿ" ಎಂಬ ಪ್ರಸಂಗ ಬರೆದಿದ್ದರು.ಅದು ಯಕ್ಷಗಾನದಲ್ಲಿ ಸೂಪರ್ ಹಿಟ್ ಕೂಡ ಆಯಿತು.ಈಗ ಶ್ರೀಯತರು ಮುಂಗಾರು ಮಳೆಯನ್ನ "ಪ್ರೇಮಾಭೀಷೇಕ"ವಾಗಿ ತಂದಿದ್ದಾರೆ.
ಮುಂಗಾರು ಮಳೆಯ ನಂದಿನಿ ಮತ್ತು ಪ್ರೀತಮ್ ಈಗ ರಂಗ ಸ್ಥಳಕ್ಕಾಗಿ ಪ್ರೇಮ ಮತ್ತು ಅಭಿಷೇಕ ಆಗಿದ್ದಾರೆ.
ಭಾಗವತರ ಕೈಲಿ "ಅನಿಸುತಿದೆ ಯಾಕೋ ಇಂದು .." ಹಾಡಿನ ಎರಡು ಲೈನ್ ಕೂಡ ಹಾಡಿಸಿದ್ದಾರೆ ಅಂತೆ.
ಎನೋ ಅಪ್ಪಾ ಆ ಮನುಷ್ಯನಿಗೆ ಯಕ್ಷರಂಗದ "ಎಸ್.ನಾರಾಯಣ್" ಎಂಬ ಬಿರುದು ಕೊಡಬಹುದು ಅಲ್ವಾ.

ಮೊನ್ನೆ ಜೂನ್ 12ರಂದು ಅನ್ನಿಸುತ್ತೆ, ಉಡುಪಿಯಲ್ಲಿ ಪ್ರೇಮಾಭೀಷೇಕ ಪ್ರಸಂಗವಿತ್ತು.ಕಲೆಕ್ಷನ್ ಚೆನ್ನಾಗಿತ್ತಂತೆ.
ಎನೋ ಜನ ಕುತೂಹಲಕ್ಕೆ ಬಂದಿರಬಹುದು .ದೇವದಾಸ್ ಈಶ್ವರಮಂಗಲ ಎನು ಬರೆದರೂ ಅದನ್ನ ಆಡಿಸ ಹೊರಟ "ಮಂಗಳಾದೇವಿ ಮೇಳ"ದ ವ್ಯವಸ್ತಾಪಕರಿಗಾದ್ರೂ ತಲೆ ಬೇಡ್ವಾ? ಕಾಸು ಹುಟ್ಟತ್ತೆ ಅಂತ ಎನು ಬೇಕಾದ್ರೂ ಪ್ರಸಂಗ ಆಡಿಸೋದಾ?
ಕೆರೆಮನೆಯವರು ಯಾವುದಕ್ಕೋ "ಸಾಂಸ್ಕೃತಿಕ ಅಪರಾಧ" ಅಂದಿದ್ದು ನೆನಪಾಗುತ್ತಿದೆ.ಬಹುಶ ಇದನ್ನು ಆ categoryಗೆ ಹಾಕಬಹುದು

ಆದರೆ ಇದು ಯಾಕೋ ನಂಗೆ ಸರಿ ಕಾಣ್ತಾ ಇಲ್ಲ.
ಇನ್ನು ಎನಿದ್ರೂ ಯಕ್ಷ ಪ್ರೇಮಿಗಳುಂಟು..ಯಕ್ಷ ಗಾನವುಂಟು ಎಂದು ಸುಮ್ನಿರಬೇಕಷ್ಟೆ ಅಲ್ವಾ..
ಸುಮ್ನಿರೊಕೆ ಮನಸು ಒಪ್ತಾ ಇಲ್ಲ ...
ನಮ್ಮದೀನಿದ್ರು ಪ್ರಸಂಗ ಬರಿಯುವವರಿಗೂ,ಪ್ರಸಂಗ ಆಡಿಸುವವರಿಗೂ ಒಳ್ಳೆ ಬುದ್ಧಿ ಬರಲಿ,ಯಕ್ಷ ಪ್ರೇಮಿಗಳಿಗೆ ಯಕ್ಷಗಾನ ಮುದ ಕೊಡಲಿ ,ಯಕ್ಷಗಾನ ಕಲೆ ಬೆಳೆಯಲಿ ಅಂತ ಹಾರೈಕೆ.
ಎನೋ ಬರುವ ತಿರುಗಾಟಕ್ಕೆ "ಮಂಗಳಾದೇವಿ ಮೇಳ"ದ್ದು ಹೊಸ ಪ್ರಸಂಗ ಅಂತೆ "ದೇವದಾಸ್ ಈಶ್ವರಮಂಗಲ " ವಿರಚಿತ "ಶಿವಾಜಿ"...ಹೌದಾ?