Tuesday, January 02, 2007

ಕಲ್ಲರಳಿ ಹೂವಾಗಿ..ಹೂವರಳಿ ಹೆಣ್ಣಾಗಿ ...

"ಕಲ್ಲರಳಿ ಹೂವಾಗಿ "ಬಿ.ಎಲ್.ವೇಣು ಅವರ ಐತಿಹಾಸಿಕ ಕಾದಂಬರಿ.ತರಂಗದಲ್ಲಿ ಧಾರಾವಾಹಿಯಾಗಿ ಬಂದು ನಂಬರ್ ಒನ್ ಪಟ್ಟದಲ್ಲಿತ್ತು.
ನಾಗಾಭರಣ "ಕಲ್ಲರಳಿ ಹೂವಾಗಿ " ಚಿತ್ರ ಮಾಡುವುದಾಗಿ ಹೇಳಿದಾಗ ನಾನು ಎಲ್ಲಿ ಕಥೆ ಮಠ ಹತ್ತಿಸುತ್ತಾರೋ ಅಂತ ಭಯಪಟ್ಟಿದ್ದೆ. ಅದರೆ ಚಿತ್ರ ನೋಡಿದ ಮೇಲೆ ಮಠ ಹತ್ತಲಿಲ್ಲ ಎನ್ನುವ ಸಮಾಧಾನ ಮನಸಿಗೆ.ನಾಗಾಭರಣ ಬಹಳ ದಿನಗಳಾದ ಮೇಲೆ ಒಂದು ಒಳ್ಳೆಯ ಚಿತ್ರ ಕೊಟ್ಟಿದ್ದಾರೆ.
ಜಯದೇವ (ವಿಜಯ್ ರಾಘವೇಂದ್ರ) ಚಿತ್ರದುರ್ಗದ ಮದಕರಿ ನಾಯಕನ(ರೆಬೆಲ್ ಸ್ಟಾರ್ ಅಂಬಿ) ಓಲೆಗಾರ.ಸದಾ ಹಾಡಿನ ಗುಂಗಿನಲ್ಲಿರುವವ. ಒಂದು ದಿನ ಹುಣ್ಣಿಮೆಯ ರಾತ್ರಿ ದುರ್ಗದ ಹೊರಭಾಗದಲ್ಲಿ ಗಾಯಗೊಂಡು ಪ್ರಜ್ನೆ ಕಳೆದುಕೊಂಡಿರುವ ಹೈದರಾಲಿಯ ಸೇನಾಪತಿಯ ಮಗಳು ನೂರ್ ಜಹಾನ್ (ಉಮಾ ಮಹೇಶ್ವರಿ) ಅನ್ನು ದುರ್ಗಕ್ಕೆ ಹೊತ್ತು ತರುತ್ತಾನೆ.ಅವನ ತಂದೆ ವೈದ್ಯ ಬಸಯ್ಯ(ಅನಂತ್ ನಾಗ್)ಆ ಶತ್ರುಪಡೆಯ ಹುಡುಗಿಯನ್ನು ಗುಟ್ಟಾಗಿ ಉಪಚರಿಸುತ್ತಾನೆ. ಅವಳನ್ನು ಅವನ ಸಂಬಂಧಿಯ ಮಗಳು,ಅನಾಥೆ ಎಂದು ದುರ್ಗಕ್ಕೆ ಪರಿಚಯಿಸುತ್ತಾನೆ.
ಅವಳಿಗೆ ಜಯದೇವ ರತ್ನ ಎಂದು ಮರುನಾಮಕರಣ ಮಾಡುತ್ತಾನೆ. ನೂರ್ ಅಲಿಯಾಸ್ ರತ್ನ ತನ್ನ ತಂದೆ ತಾಯಿಯ ಮರಣ ನೋಡಿದ ಅಘಾತದಿಂದ ಮಾತು ಕಳೆದುಕೊಂದಿರುತ್ತಾಳೆ.
ಮುಂದೆ ಅವಳ ಮತ್ತು ಜಯದೇವನ ನಡುವೆ ನಡೆವ ನವಿರು ಪ್ರೇಮವೇ ಕಥೆ.ನಾಯಕರ ಮನೆಗೆ ಸೀಮಿತವಾಗಿರುವ ರಾಜ ಸಂಪಿಗೆ ಗಾಗಿ ರತ್ನಳ ಆಸೆ. ಅದಕ್ಕೆ ಜಯ ಜೀವ ಪಣಕ್ಕಿಟ್ಟು ಪಂಜರದ ಹಕ್ಕಿ ಗೆದ್ದು ರಾಜ ಸಂಪಿಗೆಯ ನೀಡುವಂತೆ ನಾಯಕರಲ್ಲಿ ಕೋರಿಕೆ ಮಾಡುತ್ತಾನೆ .ನಾಯಕರ ತಥಾಸ್ತು. ನಂತರ ನಾಯಕರಿಂದ ಪ್ರೇಮಿಗಳ ಪ್ರೇಮಕ್ಕೆ ಒಪ್ಪಿಗೆ ಹೀಗೆ ಕಥೆ ಸುಖಾಂತ್ಯದ ಕಡೆ ಸಾಗಿತೆನ್ನುವಾಗ ಮೊಹರಂ ದಿನ ಹೈದರಾಲಿಯ ಸೈನ್ಯದ ಆಕ್ರಮಣ.ಆ ಆಕ್ರಮಣಕ್ಕೆ ನೂರ್ ಜಹಾನ್ ಳ ಅಣ್ಣಂದಿರ ಸಾರಥ್ಯ.ಆ ಯುದ್ಧದ ದಿನ ಏನಾಯಿತು ಅನ್ನುವುದಕ್ಕೆ ಸಿನಿಮಾ ನೋಡುವುದು ಉತ್ತಮ ,ಕಾದಂಬರಿ ಓದುವುದು ಸರ್ವೊತ್ತಮ.(ಸ್ಪಷ್ಟನೆ : ಬಿ.ಎಲ್.ವೇಣು ,ನಾಗಾಭರಣ ,ಮಧು ಬಂಗಾರಪ್ಪ ಯಾರು ನನಗೆ ಚಿತ್ರದ/ಕಾದಂಬರಿಯ ಪ್ರಚಾರಕ್ಕೆ ಯಾವುದೇ ರೀತಿಯ ಗುತ್ತಿಗೆ ನೀಡಿಲ್ಲ.ನಾನು ಆಂತಹ ಆಮಿಷಗಳಿಗೆ ಬಗ್ಗುವವನು ಅಲ್ಲ )

ವಿಜಯ್ ರಾಘವೇಂದ್ರ ಜಯದೇವನ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ಉಮಾ ನೂರ್ ಪಾತ್ರಕ್ಕೆ ಸೂಕ್ತ ಆಯ್ಕೆ.ಮೊರದಗಲ ಕಣ್ಣಿನ ಉಮಾ ತಮ್ಮ ಕಣ್ಣುಗಳಲ್ಲೆ ಮಾತನಾಡುತ್ತಾರೆ.ಅನಂತ್ ನಾಗ್ ,ಆರವಿಂದ್ (ಪ್ರಧಾನಿ ಪರಶುರಾಮಪ್ಪ) ,ಭಾರತಿ (ನಾಯಕನ ತಾಯಿ ನೀಲವ್ವ),ದೇವರಾಜ್ (ಹೈದರಾಲಿ) ತಮ್ಮ ತಮ್ಮ ಪಾತ್ರವನ್ನು ಚೆನ್ನಾಗಿ ನಿರ್ವಹಿಸಿದ್ದಾರೆ. ರೆಬೆಲ್ ಸ್ಟಾರ್ ಯಾವತ್ತಿದ್ದರೂ ರೆಬೆಲ್ ಸ್ಟಾರೇ, ಮದಕರಿ ನಾಯಕನೇ ಆಗಲಿ,ಕನ್ವರ್ ಲಾಲ್ ಆಗಲಿ.ಅಂಬಿ ತಮ್ಮ ರೆಬೆಲ್ styleನಲ್ಲಿ ಮದಕರಿ ನಾಯಕ ನ ಪಾತ್ರ ನಿರ್ವಹಿಸಿದ್ದು ಚಿತ್ರದ highlight(ಎಲ್ಲಾ dialogueಗಳು usual ಅಂಬಿ styleನಲ್ಲಿದ್ದವು) .ಪಾಪ ಸುಮಲತಾಗೆ ಎರಡೇ ಎರಡು dialogue .

ಬರೀ ಸರಳ ಸೀರೆ ಬಳಸಿ ನಾಯಕಿಯನ್ನು ಇಷ್ಟು ಸುಂದರವಾಗಿ ತೋರಿಸಬಹುದು ಅದಕ್ಕೆ costly costume ಬೇಡ ಅನ್ನುವುದಕ್ಕೆ ಚಿತ್ರದಲ್ಲಿ ಉಮಾ ವಸ್ತ್ರವಿನ್ಯಾಸವೇ ಸಾಕ್ಷಿ.ಕುಮಾರರಾಮದಲ್ಲಿ ಇದ್ದಂತೆ ಇಲ್ಲಿ ವಸ್ತ್ರ ವಿನ್ಯಾಸದಲ್ಲಿ ಡಾಳು ಢಾಳಾದ ಆಡಂಬರವಿಲ್ಲ ಎಲ್ಲ ಸರಳ ಸುಂದರ.
ಕುಮಾರ ರಾಮದಲ್ಲಿ ರಾಜಸ್ತಾನದಲ್ಲಿ ಚಿತ್ರಿಕರಿಸಿದ ಅದ್ಢೂರಿಯಾಗಿ ಚಿತ್ರಿಸಿದ ಯುದ್ಧದ ದೃಶ್ಯಗಳು ಬೋರ್ ಹೊಡೆಸಿದ್ದವು .ಆದರೆ ರಾಮನಗರದ ಹಿನ್ನಲೆಯಲ್ಲಿ ಯುದ್ಧದ ದೃಶ್ಯವನ್ನು ನಾಗಾಭರಣ ಸರಳವಾಗಿ effective ಆಗಿ ತೋರಿಸಿದ್ದಾರೆ.
ಚಿತ್ರದ ನಿಜವಾದ ಸ್ಟಾರ್ ಎಚ್.ಸಿ.ವೇಣುರವರ ಕ್ಯಾಮರ ಕಣ್ಣು. ನಾಗಾಭರಣರ imagination ಅನ್ನು ಸಕತ್ತಾಗಿ ವೇಣುರವರ ಕ್ಯಾಮರ ಸೆರೆ ಹಿಡಿದಿದೆ.
ಹಾಡುಗಳ ವಿಷಯಕ್ಕೆ ಬಂದರೆ ಜೈ ಹಂಸಲೇಖ. ಎಲ್ಲಾ ಹಾಡುಗಳ ಸಾಹಿತ್ಯ -ಸಂಗೀತ ಬಹಳ ಚೆನ್ನಾಗಿದೆ.ಹಾಡುಗಳು ತುಂಬಾ freequent ಆಗಿರುವುದರಿಂದ musical ಸಿನಿಮಾ ಅನ್ನಿಸಿಕೊಳ್ಳಬಹುದು. "ಕಲ್ಲರಳಿ ಹೂವಾಗಿ..ಹೂವರಳಿ ಹೆಣ್ಣಾಗಿ "ಗೀತೆಯನ್ನು ನೀವು ಖಂಡಿತಾ ಗುನುಗುತ್ತಾ ಚಿತ್ರಮಂದಿರದಿಂದ ಹೊರ ಬರುತ್ತಿರಾ. "ಸಂಪಿಗೆ ಸಂಪಿಗೆ","ಬೆಳ್ಳಿ ದೀಪಾ.." ಕಿವಿಗೆ ಇಂಪಾಗಿದೆ."ಖಾನಾ ತಾಕತ್ ಕಾ ಹೈ " ಯಲ್ಲಿ ತಿಳಿ ಹಾಸ್ಯದ ಲೇಪವಿದೆ.
great job ಹಂಸಲೇಖ.
ಆದರೆ ಕಾದಂಬರಿಯನ್ನು ಸಿನಿಮಾ ಮಾಡಿದಾಗ ಆದಕ್ಕೆ ಅದರದೇ ಆದ limitationಗಳು ಇರುತ್ತವೆ. ಹಾಡು ಸಂಗೀತಕ್ಕೆ ಜಾಗ ಕೊಟ್ಟಿರುವುದರಿಂದ ಕಾದಂಬರಿಯಲ್ಲಿ ಬರುವ ಜಯದೇವ -ರತ್ನ ಪ್ರೇಮಕಥೆಯ ಬಹಳಷ್ಟು enjoyable ತಿಳಿ ಹಾಸ್ಯದ ಭಾಗಗಳು ಮಾಯವಾಗಿದೆ. ಅದೇ ದುಃಖಕರ ವಿಷಯ. ಆ ದೃಶ್ಯಗಳು ಇದ್ದಿದ್ದರೆ ಚಿತ್ರ ಇನ್ನೂ enjoyable ಅಗುತ್ತಿತ್ತು.
ಆದರೆ 3 ಘಂಟೆ 15 ನಿಮಿಷದಲ್ಲಿ ಕಾದಂಬರಿಯ ಮೂಲವಸ್ತು ವಿಗೆ ಧಕ್ಕೆ ಬರದಂತೆ ಸಿನಿಮಾ ಮಾಡುವುದು ಬಹಳ ಕಷ್ಟದ ಕೆಲಸ .ಕಾದಂಬರಿಯ ಮೂಲವಸ್ತು ವಿಗೆ ಧಕ್ಕೆ ಬರದಂತೆ ಸಿನಿಮಾ ಮಾಡಿದಕ್ಕೆ ಧನ್ಯವಾದಗಳು ನಾಗಾಭರಣ.