Saturday, November 24, 2007

ರೈಲು ಬಿಡೋಕೆ ಶುರು ಮಾಡ್ತಾರಂತೆ


ಇವತ್ತಿನ ಪತ್ರಿಕೆಯಲ್ಲಿ ಡಿಸೆಂಬರ್ 8 ರಿಂದ ಮಂಗಳೂರು - ಬೆಂಗಳೂರು ರೈಲು ಆರಂಭಿಸುವುದಾಗಿ ರೈಲ್ವೇ ಇಲಾಖೆ ಹೇಳಿದೆ.ಲಾಲು ಯಾದವ್ ಅದನ್ನ ಉದ್ಘಾಟಿಸುತ್ತಾರಂತೆ....

ರೈಲು ಈ ಸರ್ತಿಯಾದ್ರು ಓಡಾಟ ಶುರು ಮಾಡಲಿ ಅಂತ ಹಾರೈಕೆ

(ಸುದ್ದಿಯ ಚಿತ್ರ ವಿಜಯ ಕರ್ನಾಟಕದಿಂದ copy ಮಾಡಲಾಗಿದೆ )

Thursday, November 15, 2007

ರೈಲಿನ ಸಿಳ್ಳೆ ಕೇಳಲು ಕಾತರಿಸುತ್ತಿರುವ ಕಿವಿಗಳಿಗೆ...

ದೀಪಾವಳಿಗೆ ಮನೆಗೆ ಹೋಗಿದ್ದೆ.ಆಗ ಮೈಸೂರಿನಿಂದ ಪುತ್ತೂರಿಗೆ ತಲುಪಲು ಹಿಡಿದ ಸಮಯ ಮಾಮುಲಿಗಿಂತ 2 ಘಂಟೆ ಹೆಚ್ಚು.ತಡವಾಗಿದ್ದಕ್ಕೆ ಬೇಸರವಿರಲಿಲ್ಲ,ಆದರೆ ಯಾವಾಗಲು ಮೈಸೂರಿನಲ್ಲಿ ಕಣ್ಣು ಮುಚ್ಚಿದರೆ ಪುತ್ತೂರಿನ ವರೆಗೆ ಎಚ್ಚರವಿಲ್ಲದ ನಿದ್ರೆ ಆದರೆ ಅವತ್ತು ಮಾತ್ರ ಕಣ್ಣಿಗೆ ನಿದ್ರೆ ಇರಲೆ ಇಲ್ಲ ಪ್ರತಿ ಹದಿನೈದು ನಿಮಷಕ್ಕೊಮ್ಮೆ "high jump practice",ಯಾಕೋ ಅವತ್ತು bus ಬದಲು "mixer"ನಲ್ಲಿ ಕೂತ ಹಾಗಿತ್ತು.ಎನಪ್ಪಾ reason ಅಂದ್ರೆ ಬೆಂಗಳೂರನ್ನ ಮಂಗಳೂರಿಗೆ connect ಮಾಡೋ ಶಿರಾಡಿ ಘಾಟಿ "ಜೈ" ಅಂದಿದೆ,ರಸ್ತಾ ಬಂದ್.ಅದ್ದರಿಂದ ಎಲ್ಲಾ ಬಸ್ ಗಳು ಚಾರ್ಮಾಡಿ ಇಲ್ಲಾ ಮೈಸೂರಿನ ಹಾದಿ ಹಿಡಿದು ಮಂಗಳೂರನ್ನ ಸೇರುತ್ತವೆ.ಅವುಗಳೆಲ್ಲದರ ನಡುವೆ "TANKER" ಭಸ್ಮಾಸುರನ ಕಾಟ.ಯಾಕೋ ಮೊದಲೆಲ್ಲ "over nite journey" ಆಗಿದ್ದ ಮಂಗಳೂರು -ಬೆಂಗಳೂರು ಈಗ "16hours journey" ಆಗಿದೆ.
ಚರ್ಮಾಡಿಯಲ್ಲಿ trafic block ಆದರೆ "24 hours journey" ಕೂಡ ಆಗಬಹುದು.ಎರಡು ವರ್ಷದ ಹಿಂದೆಯೇ ಶಿರಾಡಿ ಘಾಟಿ ಯಾಕೋ ನನ್ನ ಕೈಲೆ ಆಗಲ್ಲ ಅಂತ ಒದ್ದಾಡೋಕೆ ಶುರು ಮಾಡಿತ್ತು ಅದು ಯಾಕೋ ನಮ್ಮ ಕಿವಿಗೆ ಬೀಳಲೇ ಇಲ್ಲ. ಈಗ "enough is enough" ಅಂತ ಶಿರಾಡಿ ಘಾಟಿ ಕೈ ಎತ್ತಿದೆ.ಆದರೂ ನಮ್ಮ ಜನ ಅದರ ಬಗ್ಗೆ ಯೋಚನೆ ಮಾಡದೆ alternate ದಾರಿ ಹುಡುಕಿ ವಯಾ ಚಾರ್ಮಾಡಿ,ವಯಾ ಮೈಸೂರು, ವಯಾ ಶಿವಮೊಗ್ಗ ಅಂತಿದಾರೆ.ಚರ್ಮಾಡಿ ಪಾಪ ಒತ್ತಡ ತಡೀಲಾರದೆ ನರಳುತ್ತಿದೆ,ಮೈಸೂರು ರಸ್ತೆಯಲ್ಲಿ ಕೆಲಸ ನಡಿಯುತ್ತಿದೆ.
ಜನಾ ಅದಕ್ಕೆಲ್ಲಾ adjust ಆಗ್ತಾ "ಒಯ್ ,ಬೆಂಗ್ಳೂರಾ ಹಾಂಗಾದ್ರೆ ನೀವು ಕೈಯಲ್ಲಿ ಒಂದು ನೀರಿನ ಬಾಟ್ಲಿ,ತಿನ್ನ್ಲಿಕ್ಕೆ ಎನಾದ್ರು ತಿಂಡಿ ಕಟ್ಟಿಕೊಂಡ್ರೆ ಒಳ್ಳೇದು ದಾರಿ ಬ್ಲಾಕ್ ಗೀಕ್ ಆದ್ರೆ ಎಂತ ಮಾಡ್ತೀರಿ..ಇವತ್ತು ರಾತ್ರಿಯ ಬಸ್ ಹಾಂಗಾರೆ ನಾಳೆ ಮಧ್ಯಾಹ್ನ ತಲುಪುವುದು ಗ್ಯಾರಂಟಿ " ಅಂತ ಪುಕ್ಕಟೆ ಸಲಹೆ ಕೊಟ್ಟು ತಮ್ಮ ಕರ್ತವ್ಯ ನಿಭಾಯಿಸಿದ ತೃಪ್ತಿಯಿಂದ ಸಾಗುತ್ತಾರೆ.
ಇದು NH 48 ಸ್ವಾಮಿ


ನಮ್ಮ ಕೇಂದ್ರ ಭೂ ಸಾರಿಗೆ ಸಚಿವರಾದ ಮಾನ್ಯ ಕೆ.ಎಚ್.ಮುನಿಯಪ್ಪನವರು ಮಂಗಳೂರು ಹೆಸರು ಕೇಳಿದ್ರೆ ಸಾಕು ಬೆವರು ಸುರಿಸುತ್ತಾ "ಎಲ್ಲಾ ಅನುದಾನ ತಮಿಳುನಾಡು ತಗೋತಿದೆ " ಅಂತ ಎಲ್ಲರ ಹತ್ರ ಹೇಳುತ್ತಾ ಬರ್ತಿದಾರೆ.ನಮ್ಮ ಶಾಸಕರು ಯಡ್ಡಿ ಪಟ್ಟಾಭೀಷೇಕದಲ್ಲಿ ಮುಳುಗಿದ್ದಾರೆ ಅಂತ ಅನ್ನಿಸ್ತಾ ಇದೆ. ಹತ್ತು ಹದಿನೈದು ವರ್ಷದ ಹಿಂದೆ ರೈಲು ಹಳಿ ಕಿತ್ತು ಇನ್ನೋಂದು ವರ್ಷದಲ್ಲಿ ಬೆಂಗಳೂರುಗೆ ರೈಲು ಅಂತ ರೈಲು ಬಿಟ್ಟಿದ್ದೆ ಬಿಟ್ಟಿದ್ದು ಪಾಪ ನಂಬಿ ಕೂತ ಜನಕ್ಕೆ ರೈಲೂ ಇಲ್ಲ ಈಗ ಓಡಾಡುವುದಕ್ಕೆ ರಸ್ತೆನೂ ಇಲ್ಲ. ನಾನು engg ಗೆ ಸೇರುವಾಗ ಯಾರೋ ಒಬ್ಬರು ನನ್ನ ಹತ್ರ "ನೀನು ಪಸ್ಟ್ ಯಿಯರ್ ಮಾತ್ರ ಬಸ್ ನಲ್ಲಿ ಹೋಗ್ಬೇಕು, ಇನ್ನೋಂದು ವರ್ಷದಲ್ಲಿ ಮೈಸೂರಿಗೆ ರೈಲು ಇರ್ತದೆ " ಅಂತ ಬಿಟ್ಟ ರೈಲು ನೆನಪಾಗ್ತಿದೆ.
ವಿಧಾನ ಸೌಧದಲ್ಲಿ ಕುಂತಿರುವ ಎಲ್ಲಾ "ಸನ್ಮಾನ್ಯ"ರಲ್ಲಿ ಎನು ವಿನಂತಿ ಅಂದರೆ ಸ್ವಲ್ಪ ಮಂಗಳೂರು -ಬೆಂಗಳೂರು ರೈಲಿನ ಬಗ್ಗೆ ರೈಲು ಬಿಡುವುದು ಕಡಿಮೆ ಮಾಡಿ ರೈಲು ಬರೋದಕ್ಕೆ ಕೆಲ್ಸ ಮಾಡಿ ಇಲ್ಲಾ ರಸ್ತೆ ಸರಿ ಮಾಡಿಸಿ ಕೊಡಿ..ಎರಡೂ ಅಗುವುದಿಲ್ಲ ಅಂತಿದ್ದರೆ ಸುಮ್ಮನಿರಿ ನಮ್ಮ ಜನ ಕೆಟ್ಟ ರಸ್ತೆಗೆ, ಬಾರದ ರೈಲಿಗೆ ಹೊಂದಿಕೊಳ್ತಾರೆ.ನ೦ತರ ಯಾರು ಸಿಕ್ಕಿದ್ರೂ ಎಲ್ಲಿ ಸಿಕ್ಕಿದ್ರೂ "ಆವತ್ತು ನಮ್ಮ ಮಂಗಳೂರಿಗೆ ಅಂತ ಕೊಟ್ಟ ಪೈಸೆಯನ್ನೆಲ್ಲಾ ದೇವೇಗೌಡ ಹಾಸನಕ್ಕೆ ತಿರ್ಗಿಸಿದ್ದಂತೆ ಮಾರಾಯ್ರೆ ..ಗೊತ್ತು೦ಟಾ" ಅ೦ತ ಶುರು ಮಾಡ್ತಾರೆ .


ನಾಡಿದ್ದು ನವೆ೦ಬರ್ 20ಕ್ಕೆ ಪುತ್ತೂರಲ್ಲಿ ರೈಲಿಗಾಗಿ ಧರಣಿಯಂತೆ ಅ೦ತಾ ಸುದ್ದಿ...year end ಅಲ್ಲಿ ರೈಲು ಶುರು ಅ೦ತಾನೂ ಇನ್ನೊ೦ದು ಸುದ್ದಿ... ರೈಲು ಶುರುವಾದ್ರೆ ಒಳ್ಳೇದು ಇಲ್ಲಾ೦ದ್ರೆ ಮಂಗಳೂರು -ಬೆಂಗಳೂರು ಪ್ರಯಾಣದ ಶಿಕ್ಷೆ ಮು೦ದುವರಿಯಲಿದೆ.
ಎನೇ ಇರಲಿ..ಯಾರಾದ್ರು ಮಂಗಳೂರು -ಬೆಂಗಳೂರು ರೈಲಿಗೆ ಕಾಯುತ್ತಿದ್ದರೆ ಕುಮಾರಣ್ಣನ style ಆಲ್ಲಿ ಹೇಳೋದಾದ್ರೆ "ಮಂಗಳೂರು -ಬೆಂಗಳೂರು ರೈಲು ಏನಿದೆ...<ದೊಡ್ದ pause>...ಅದು ಶುರುವಾಗಬೇಕು ಅ೦ತಾ ಜನ ಏನು ಬಯಸ್ತಿದಾರೆ ...<ದೊಡ್ದ pause>... ಏನು ಈ ರೈಲು ನಡೀಬೇಕು ಅ೦ತ ಎಲ್ಲರ ಆಸೆ ಇದೆ ...<ದೊಡ್ದ pause>...ಈ ಬಗ್ಗೆ ಸರಕಾರ ಕ್ರಮ ಏನು ಕೈಗೊಳ್ಳೂತ್ತದೆ ಜನ ಏನು ಕಾಯ್ತಿದಾರೆ ...<ದೊಡ್ದ pause>...ರೈಲಿಗಾಗಿ ಏನು ಜನ ಕಾಯ್ತಿದಾರೆ ...<ದೊಡ್ದ pause>...ರೈಲು ಬರ್ತದೆ ಅ೦ತ ಜನ ಏನು ಕಾಯ್ತಿದಾರೆ ...<ದೊಡ್ದ pause>... ಅವರಿಗೆಲ್ಲಾ ಒಳ್ಳೇದಾಗಲಿ" ಅಥವಾ simple ಆಗಿ ಹೇಳೋದಾದ್ರೆ all the best....

shhhh....ಕೊನೆಯಲ್ಲಿ ಒ೦ದು ಗುಟ್ಟು : ಬರ್ಮುಡಾ ತ್ರಿಕೋಣ ,UFO,ಅನ್ಯ ಗ್ರಹ ಜೀವಿಗಳೋಂದಿಗೆ ವಿಶ್ವದ ಬಿಡಿಸಲಾಗದ ಕಗ್ಗ೦ಟುಗಳು i mean "worlds unsolved Mysteries" ನಲ್ಲಿ ಮಂಗಳೂರು -ಬೆಂಗಳೂರು ರೈಲು ಶುರುವಾಗುವ ದಿನ ಹೊಸ ಸೇರ್ಪಡೆಯ೦ತೆ.

Sunday, September 16, 2007

3 ಸಾಲುಗಳು -೦೩


ಹಳೆ ಗೆಳೆಯರನ್ನ ಹುಡುಕಿಕೊ೦ಡು ದೂರದ ಊರಿಗೆ ಹೋದಾಗ
ಸಿಕ್ಕಿದ್ದು ಬೊಗಸೆ ತು೦ಬಾ ನೆನಪುಗಳು ಅವಕ್ಕೊಸ್ಕರ ಅಲ್ಲಿ ತನಕಾ ಹೋಗಬೇಕಿತ್ತಾ..
ಸ್ವಲ್ಪ ಮನದ ಕಸ ಸರಿಸಿದರೆ ಇಲ್ಲೆ ಸಿಗುತ್ತಿತ್ತು.

Thursday, September 06, 2007

3 ಸಾಲುಗಳು -೦೨



ಮುಚ್ಚಿದ ಬಾಗಿಲಿನ ಕತ್ತಲೆ ಕೋಣೆಯಲ್ಲಿ ಅವರಿಬ್ಬರು
ಪ್ರೀತಿಯ ದಿವ್ಯಬೆಳಕನ್ನ ಹುಡುಕುತ್ತಿದ್ದರೆ
ಉಳಿದವರೆಲ್ಲರಿಗೆ ಕಾಮದ ವಾಸನೆ ಬಡಿಯುತ್ತಿತ್ತು

Wednesday, September 05, 2007

3 ಸಾಲುಗಳು...


ನನ್ನ ಮನದಲ್ಲಿ ಸದಾ ಕುಣಿಯುತ್ತಿರುವ ಸದಾ ಹಾಡುತ್ತಿರುವ ನಿನಗೆ
ಯಾರಾದ್ರೂ ಬ೦ದು ನನ್ನ ಮನದರಸಿ ಯಾರು ಅ೦ತ ಕೇಳಿದರೆ
ನಾಲಿಗೆಗೆ ಬರಲು ನಿನಗೆ ಯಾಕೆ ನಾಚಿಕೆ?


ಜಗತ್ತಿನಲ್ಲಿ ಎರಡು ಅಲುಗಿನ ಕತ್ತಿಗಿ೦ತ ಹರಿತ
ಯಾವುದು ಇಲ್ಲ ಅ೦ತ ನಾನು ನ೦ಬಿದ್ದೆ
ನಿನ್ನ ಕಣ್ಣುಗಳ ನೋಡುವ ತನಕ

(ರಾಜೀವ ಬರೆದ ಹೈಕುಗಳ(ಜಪಾನಿ ಭಾಷೆಯಲ್ಲಿ ಕಿರುಗವಿತೆ)ಓದಿ ನಾನು ಬರೆಯೋ ಪ್ರಯತ್ನ ಮಾಡಿದೆ.)

Friday, August 10, 2007

ನೋಟ

ಅವಳು ಬೈಕ್ ಹಿಂದಿನ ಸೀಟ್ ನಿಂದ ಇಳಿದು ತನ್ನ ಕೂದಲನ್ನ ಸರಿಪಡಿಸಿ ಹಾಕಿದ್ದ ಟೀ-ಶರ್ಟ್ ಹಿಂಭಾಗ ಕೆಳಕ್ಕೆ ಜಗ್ಗುತ್ತಾ ನಿಂತಳು.ಅವಳೊಂದಿಗೆ ಬಂದ ಅವಳ boyfriend ಬೈಕ್ ಪಾರ್ಕ್ ಮಾಡಿ ಬಂದು ಅವಳ ಕೈ ಹಿಡಿದು ಮುನ್ನಡೆದ.ಇಬ್ಬರೂ ಮಾತನಾಡುತ್ತ coffe day ನ ಒಳಗೆ ಹೋಗಿ cold coffee orderಮಾಡಿ ಕೂತರು.ಇಬ್ಬರು ಪರಸ್ಪರ ದೃಷ್ಟಿಯುದ್ಧ ಮಾಡುತ್ತಾ ತಮ್ಮ ತಮ್ಮ ಆಫೀಸಿನ ಕೆಲಸದ ಬಗ್ಗೆ ಮಾತಾಡತೊಡಗಿದರು.ರಿಂಗುಣಿಸುತ್ತಿದ್ದ ಫೋನ್ ಹಿಡಿದು ಹೊರಗೆ ಬಂದ ಅವಳ boyfriend ಎನೋ ಗಹನವಾದ ವಿಚಾರವನ್ನ ತನ್ನ ಕೈ ಸನ್ನೆಗಳನ್ನೆಲ್ಲಾ ಬಲಸಿ ವಿವರಿಸುತ್ತಾ ಶತಪಥ ತಿರುಗುತ್ತಿದ್ದ.ಬಂದ cold coffee ಹೀರುತ್ತಾ ಆಚೀಚೆ ಕಣ್ಣ ಹಾಯಿಸುವಾಗಲೇ ತಿಳಿದಿದ್ದು ,ಎದುರಿನ ಟೇಬಲ್ ನಲ್ಲಿ ಕೂತ ಗೂಬೆಯೊಬ್ಬ ಅವಳನ್ನ ರೆಪ್ಪೆ ಮಿಟುಕಿಸದೇ ನೋಡುತ್ತಿದ್ದ. ಅವನ ನೋಟಕ್ಕೆ ಗಲಿಬಿಲಿಗೊಂಡ ಅವಳು ಅವನನ್ನ ದುರುಗುಟ್ಟಿದಳು.ಆದರೂ ಅವನು ರೆಪ್ಪೆ ಮಿಟುಕಿಸದೇ ಅವಳನ್ನ ನೋಡುತ್ತಲೇ ಇದ್ದ,ವೇಟರ್ ತಂದಿಟ್ಟ ಕಾಫಿಯನ್ನ ಕೂಡ ಗಮನಿಸದೇ.ಗಾಬರಿಗೊಂಡು ಅವಳು ತನ್ನ ಟೀ-ಶರ್ಟ್ ಮೇಲೆ ಜಗ್ಗುತ್ತಾ ಅವನು ತನ್ನನ್ನ ಈ ರೀತಿ ಯಾಕೆ ನೋಡುತ್ತಿದ್ದಾನೆ ಅಂತ ಯೋಚಿಸತೊಡಗಿದಳು.ಅವನ ಕಣ್ಣುಗಳು ಮಾತ್ರ ಅವಳನ್ನೇ ದುರುಗುಟ್ಟುತ್ತಿದ್ದವು.ಎರಡು ನಿಮಿಷ ಎನೆಲ್ಲಾ ಕಿತಾಪತಿ ಮಾಡುತ್ತಾ ಅವನ ಕಡೆ ಗಮನ ಹರಿಸುತ್ತಿಲ್ಲ ನಟಿಸಿದಳು.ಪುನಹ ಅವನೆಡೆಗೆ ನೋಡಿದರೆ ಆಗಲೂ ಅವನ ಕಣ್ಣುಗಳು ಅವಳೆಡೆಗೆ ನೆಟ್ಟಿದ್ದವು.ಅವಳು ಜರ್ಕಿನ್ ಧರಿಸಿ ಮೈ ಮಡಿಚಿ ಕೂತಳು,ವಿಧ ವಿಧ ಭಂಗಿ try ಮಾಡಿದಳು.
ಅವನ ಕಣ್ಣುಗಳು ಮಾತ್ರ ಅವಳನ್ನೇ ಸೆರೆ ಹಿಡಿಯುತ್ತಿದ್ದವು.
ಬೇಜಾರು ಬಂದು ಆಕೆ ತನ್ನ ಕುರ್ಚಿಯನ್ನು ತಿರುಗಿಸಿ ಅವನಿಗೆ ಬೆನ್ನು ಕೊಟ್ಟು TV ನೋಡುತ್ತಾ ಕೂತಳು.TV ಕಡೆ ಯಾಕೋ ಮನಸ್ಸಿರಲಿಲ್ಲ.ಅವನೆಡೆಗೆ ಕಳ್ಳನೋಟ ಬೀರಿದಳು.ಅವನ ಕಣ್ಣುಗಳು ಮಾತ್ರ ಅವಳನ್ನೇ ಸೆರೆ ಹಿಡಿಯುತ್ತಿದ್ದವು.ಅವಳ ಸಹನೆ ಮೀರಿತು, ಇಪ್ಪತ್ತು ನಿಮಿಷ ಅವನ ಕಣ್ಣೋಟ ಸಹಿಸಿದ್ದಳು.ಎದ್ದು ಹೋಗಿ ಅವನ ಕಪಾಳಕ್ಕೆ ಬಿಗಿದು "ಅಕ್ಕ ತಂಗೀರು ಯಾರು ಇಲ್ವಾ?" ಅಂತ ಕೇಳಿ ಬುಸುಗುಟ್ಟುತ್ತಾ ಮುನ್ನಡೆದಳು.ಫೋನ್ ಕರೆ ಮುಗಿಸಿ ಅವಳೆಡೆಗೆ ಬರುತ್ತಿದ್ದ boyfriend ಹತ್ರ ರೋಡ್ ರೋಮಿಯೋಗಳನ್ನ ಬೈಯುತ್ತಾ,coffee day ಬಾಗಿಲು ದಬ್ಬಿ ಹೊರನಡೆದಳು.
ಅವಳು ಹೊಡೆದ ರಭಸಕ್ಕೆ ಅವನ ಎರಡು ಕಣ್ಣುಗಳ ಜಾಗದಲ್ಲಿ ಜೋಡಿಸಿದ್ದ ಗಾಜಿನ ಕಣ್ಣುಗಳಲ್ಲೊಂದು ಕೆಳಗೆ ಬಿದ್ದಿತ್ತು.ಅವನು ಕೆಳಗೆ ಬಗ್ಗಿ ಅದನ್ನು ಹುಡುಕುವ ಪ್ರಯತ್ನ ಮಾಡುತ್ತಿದ್ದ.

Wednesday, August 01, 2007

ಮಳೆ ...

ಹೊರಗು ಮಳೆ ಸುರಿಯುತ್ತಿದೆ
ಮಳೆಯಿಂದ ಇಳೆ ಓದ್ದೆ
ಮನಸು ಓದ್ದೆ ಓದ್ದೆ
ಮಳೆ ನೀರು ನೆಲ ಸೇರಿ ಹೊರಗೆಲ್ಲ ಕೆಸರು..
ಹಳೆ ನೆನಪುಗಳು ಕದಡಿ ಮನವೆಲ್ಲ ಕೆಸರು
ಧೋ ಎಂದು ಮಳೆ ಸುರಿದು ಕೆಸರು ಕೊಚ್ಚಿ ಹೋಗಲಿ
ನೆನಪುಗಳು ಕೊಚ್ಚಿ ಹೋಗಲಿ

ಕೂತು ಕಾಯುತ್ತಿದ್ದೇನೆ
ಹಾಳಾದ್ದು ನಿನ್ನ ಕಣ್ಣುಗಳು ಯಾವುದು ಕೊಚ್ಚಿ ಹೋಗದಂತೆ ತಡಿಯುತ್ತಿವೆ
ಯಾಕೆ ಬೇಕಿತ್ತು ನಿನ್ನ ಕಣ್ಣುಗಳ ಸಹವಾಸ
ಮೊದಲು ನಾನು ಸುಖಿಯಾಗಿದ್ದೆ
ನೆಮ್ಮದಿ ಇತ್ತು ಬಾಳಲ್ಲಿ
ಕಣ್ತುಂಬ ನಿದ್ದೆ ಇತ್ತು

ಮಳೆ ಬಂದು ನೆನಪುಗಳ ಕದಡಿ ಹೊಗಿದೆ,
ಧೋ ಎಂದು ಮಳೆ ಸುರಿದು ಎಲ್ಲಾ ಕರಗಿ ಹೋಗಬಾರದೆ..

(ಹೊರಗೆ ನೋಡಿದಾಗ ಮಳೆ ಸುರಿಯುತಿತ್ತು....ಮನಸಿಗೆ ಬಂದಿದ್ದನ್ನ ಬಂದ ಹಾಗೆ ಬರೆದೆ)

Monday, July 16, 2007

ಮದುವೆ ಮನೆ..ಬನ್ಸ್ ಭಾಜಿ...ಕ್ರೈಂ ಡೈರಿ....

18 june 2007
"ಯಜಮಾನ್ರೆ ನಮ್ಮ ಮಾವನ ಮನೆಯಲ್ಲಿ double function ಇದೆ. ಜುಲೈ 9 ರಜೆ ಹಾಕಿ ಬಂದು ಬಿಡಿ..ಇನ್ನೂ ಹದಿನೈದು ದಿನ ಇದೆ ರಜಾ apply ಮಾಡಿಬಿಡಿ"
"ಅಲ್ಲಾ..ಅದು ರೋಹಿತಣ್ಣ..ಕೆಲ್ಸ ತುಂಬಾ"
"ಬನ್ನಿ ಸಾರ್ ..ನಿಮ್ಮ ಅತ್ತಿಗೆ ತಂಗಿಯರ ಮದುವೆ ಒಂದು ಜುಲೈ8ಕ್ಕೆ,ಇನ್ನೊಂದು 9ಕ್ಕೆ,ಬರದಿದ್ದರೆ ನಿಮಗೆ ಕಷ್ಟ..ನೋಡಿ"
"ಅಲ್ಲಾ ...ಕೆಲಸ..."
"ಕೆಲಸಕ್ಕೇನು ಸಾರ್ ..ಇಲ್ಲಿ ಬನ್ನಿ ಮದುವೆ ಮನೆಯಲ್ಲಿ ಬೇಕಾದಷ್ಟು ಕೆಲಸ ಇದೆ,ಪಂಕ್ತಿಯಲ್ಲಿ ಬಡಿಸೋದು,cameraದವನಿಗೆ ಹೇಳಿಲ್ಲಾ ನೀವು ಬಂದ್ರೆ ಫೊಟೋ ತೆಗೀಬಹುದು ..official cameraman ಆಗಿ...ಬನ್ನಿ ಸಾರ್ ....ನಿಮಗೆ ಸ್ವಲ್ಪ ಉತ್ತರ ಕನ್ನಡದ ಹಸಿರು ತೋರಿಸೋಣ"
"ಆಲ್ಲೇನಿದೆ..ಕಾಡು ಬೆಟ್ಟ ಗುಡ್ಡ ಗದ್ದೆ, M-80 ,ದಕ್ಷಿಣ ಕನ್ನಡದ ಮಲೆನಾಡಿನವರಿಗೆ ನೀವೇನು ಹಸಿರು ತೋರಿಸೋದು ,ಅದೇ ಹಸಿರು ,ಅದೇ ಪಾಚಿ,ಅದೇ ಜುಲೈ ತಿಂಗಳ ಮಳೆ ಭೋರೋ ಅಂತ ಸುರಿತಾ ಇರೊತ್ತೆ."

"ಅಲ್ಲಾ ನಮಗೆ ಗೊತ್ತು ರೀ..ನೀವು carrot ಇಲ್ಲದೇ ಬರೊಲ್ಲಾ ಅಂತ"
"carrot ಬೇಡ...ಬೀಟ್ರೂಟು ಬೇಡಾ"
"ಗುರುವೇ ..ನೋಡಿ ರಜೆ ಹಾಕಿ ಬಂದ್ರೆ ...."



ಈ ರೀತಿ ನನಗೆ ರೋಹಿತನ ಕಡೆಯಿಂದ invitation ಬಂದಿದ್ದು.ಕಳೆದ ನಾಲ್ಕುವರೆ ವರ್ಷದಿಂದ ದುಬೈಯಲ್ಲಿ ಇರುವ ಅಣ್ಣಾವ್ರು ..ಬನ್ನಿ ಅಂತಿದಾರೆ ಹೋಗದೇ ಇದ್ರೆ ಪಾಪ ಬೇಜಾರು ಮಾಡ್ಕೊತಾರೆ ಅಂತ ಒಂದು ದಿನ ರಜಾ ಹಾಕಿ ಶಿರಸಿಗೆ ಹೊರಡೋ plan ಹಾಕಿದೆ.

ಮ್ ಮ್ ಬನ್ಸ್..

8,9 july 2007
"ಇವ ಸನತ್ ಹೇಳಿ,ಪುತ್ತೂರಿಲಿ ನಂಗೆಲ್ಲ ಒಂದೇ ವಠಾರಲ್ಲಿ ಇದ್ದದ್ದು. ಈಗ ಮೈಸೂರಿಲಿ soft engg.ಮದುವೆಗೆ ಬಾ ನಿಂಗೆ ಸ್ವಲ್ಪ ಉತ್ತರಕನ್ನಡದ ಸೌಂದರ್ಯ ತೋರಿಸ್ತೆ ಹೇಳಿದೆ ಅದಕ್ಕಾಗಿ 'ಪಕ್ಷಿ ವೀಕ್ಷಣೆ'ಗೆ ಬಯಿಂದ."( ಈ ರೀತಿ ನನ್ನನ್ನ ಎಲ್ಲರಿಗೂ ಪರಿಚಯಿಸಿದಕ್ಕೆ ರೋಹಿತಣ್ಣಂಗೆ ಅನಂತಾನಂತ ಧನ್ಯವಾದಗಳು.
ಸ್ವಗತ: ಮೈಸೂರಿಂದ ನೀನು ಕರೆದೆ ಅಂತ ಬಂದ್ರೆ ಈ ಸನ್ಮಾನನ..ಗುರು ಯಾವಾಗಾದ್ರು ನನ್ನ ಕೈಗೆ ಸರಿಯಾಗಿ ಸಿಕ್ಕು ...ನಿನ್ನ ನೋಡ್ಕೋಳ್ತೀನಿ..)
ಪುಣ್ಯಾತ್ಮ ಯಾವಾಗ "ಪಕ್ಷಿ ವೀಕ್ಷಣೆಗೆ ಬಯಿಂದ" ಅಂತ ಉಲಿದನೋ ಅದೇ ಕೊನೆ ಆ ಶಬ್ಧ ಕೇಳೀದನೇ ಹೊರತು "ಪಕ್ಷಿ ವೀಕ್ಷಣೆ" ಆಗಲೇ ಇಲ್ಲ. ಅವನನ್ನ ಕೇಳಿಬಿಟ್ಟೆ
"ಗುರುಗಳೇ ..ಪಕ್ಷಿ ವೀಕ್ಷಣೆಗೆ ಬಯಿಂದ..ಪಕ್ಷಿ ವೀಕ್ಷಣೆಗೆ ಬಯಿಂದ...ಅಂತೀರಲ್ಲಾ ಇಲ್ಲಿ ಪಕ್ಷಿ ತೋರಿಸಿ ...ಬರೀ ಮುದಿಹದ್ದು ಗಳೇ ಇರುವುದು", ಆದಕ್ಕೆ ಉತ್ತರ ಬಂದಿದ್ದು,
"sorry..ಸಾರ್ ...ಅತಿವೃಷ್ಟಿಯಿಂದ ಪಕ್ಷಿಗಳು ಗೂಡಿನಿಂದ ಹೊರಗೆ ಬರಲಿಲ್ಲ ಅಂತ ಕಾಣೋತ್ತೆ."

ನಾನು ಮೊದಲು ಯಾವಾಗಲೋ "ಓ...ಮನಸೇ"ಯಲ್ಲಿ ಉತ್ತರ ಕನ್ನಡದಲ್ಲಿ ಕೂಸುಗಳ ಬರದ ಬಗ್ಗೆ ಓದಿದ್ದೆ.ಆದರೆ ಪರಿಸ್ಥಿತಿಯ ಗಂಭೀರತೆ ಅರ್ಥ ಆಗಿದ್ದೆ ಮೊನ್ನೆ ಶಿರಸಿಯಲ್ಲಿ.ಯಾಕೋ ಮಠದ ವತಿಯಿಂದ ಪ್ರತಿವರ್ಷ ವಧು-ವರ ಸಮ್ಮೇಳನ ಮಾಡಿದ್ರೆ ಯುವಜನತೆಗೆ ಬಹಳ ಉಪಕಾರ ವಾಗಬಹುದು ಅಂತ ರೋಹಿತನ ಹತ್ರ ಪ್ರಸ್ತಾಪ ಇಟ್ಟೆ. "ಸಾಕು ಸುಮ್ಮನಿರೋ ರಾಜ..ಬಿಟ್ಟಿ ಏಟುಗಳು ತಿನ್ನೋ ಪರಿಸ್ಥಿತಿ ಬರಬಹುದು ನಿನ್ನ ಈ idea ಯಾರಿಗೂ ಹೇಳ್ಬೇಡ"ಅಂದ. ಯಾಕೋ ಈ ವಿಷಯದಲ್ಲಿ ಯೋಚನೆ ಮಾಡಬೇಕಾದವರು ಸಾಕಷ್ಟು ಯೋಚನೆ ಮಾಡುತ್ತ್ತಿಲ್ಲಾ ಅನ್ನಿಸುತ್ತಿದೆ .
ಎಲ್ಲದರ ನಡುವೆ ಶಿರಸಿ ಪೇಟೆಯಲ್ಲಿ ನಿಂತು ಹಿಂಗೆ ಫೊಟೋ ತೆಗಿತಾ ಇದ್ದೆ,ಒಬ್ಬ ಮಹಾನುಭಾವರು ಬಂದು "ಸಾರ್ ನೀವು ರಿಪೋರ್ಟರಾ? "ಅಂತ ಕೇಳಿದ್ರು,ನಾನು "ಹೌದು, ನಾನು ಕ್ರೈಂ ಡೈರಿ ರಿಪೋರ್ಟರ್,ನಿಮ್ಮದು ಒಂದು ಫೊಟೋ ತಗೋಳ್ಳಲಾ? ಒಳ್ಳೆ story ಬರೀತೀನಿ" ಅಂತ reply ಮಾಡಲಿದ್ದವನು ಹಾಗೆ reply ಮಾಡಿದ್ರೆ ಮಾರನೇ ದಿನ "ನಕಲಿ ಕ್ರೈಂ ಡೈರಿ ರಿಪೋರ್ಟರ್ ಆಗಿ ಏಟು ತಿಂದ ಭೂಪ" ಅನ್ನೋ ಪೇಪರ್ headline ಗ್ಯಾರಂಟಿ ಅಂದುಕೊಂಡು ಬಿಟ್ಟಿ smile ಕೊಟ್ಟು ಮುಂದೆ ನಡೆದೆ.
ಮದುವೆ ಮನೆಲಿ ಒಬ್ಬರಂತು ಬಂದು "ಅಪ್ಪಿ, ಯಾವ ಸ್ಟುಡಿಯೋನೋ ನಿಂದು,ಮುಂದಿನ ತಿಂಗಳು ಎಮ್ಮನೇಲಿ...."ಅಂತ photographyಗೆ advance booking ಮಾಡೋ ಪ್ರಯತ್ನ ಮಾಡಿದ್ರು.
ಅದಕ್ಕೆ ನಾನು "ಆನು ಮೈಸೂರಿಂದ ಬಯಿಂದೆ ,special ಆಗಿ ಕರಸಿದ್ದೋ .. " ಅಂತ ಹೇಳಿ ತಪ್ಪಿಸಿಕೊಂಡೆ.ಆದ್ರೆ ಯಾಕೋ company ಕೊಡೋ ಸಂಬಳ ನೋಡಿದ್ರೆ ಯಾಕೋ ಮದುವೆ/ಮುಂಜಿಗಳಲ್ಲಿ ಬಡಿಸುವ/photo ತೆಗೆಯುವ contract ತಗೋಂಡ್ರೆ ಯಾಕೋ ಲಾಭ ಅನ್ನಿಸುತ್ತಿದೆ.
ಅಂದ ಹಾಗೆ importent ವಿಷಯ ಮರೆತೆ ,ನಾಣಿಕಟ್ಟದಲ್ಲಿ ಸುರಿವ ಮಳೆಯಲ್ಲಿ ಕೂತು ಬಿಸಿ ಬಿಸಿ ಬನ್ಸ್-ಭಾಜಿ ಮತ್ತು ಸೇವ್ ಭಾಜಿ ತಿಂದದ್ದು.ಹೊರಗಡೆ ಧಾರಾಕಾರ ಮಳೆ,ಮೈ ಎಲ್ಲ ಚಳಿಗೆ ಮರಗಟ್ಟಿದಂತಾಗಿತ್ತು..ಆ ಹೊತ್ತಿಗೆ ಸರಿಯಾಗಿ ನಿಮಗೆ ಬಿಸಿ ಬಿಸಿ ಬನ್ಸ್ ಸಿಕ್ಕಿದ್ರೆ ಎನು ಆನಂದ ..ಅದೇ ಆನಂದ ನಮಗೂ ಆಗಿದ್ದು.
ಥಾಂಕ್ಯು ಅತ್ತಿಗೆ... ಆ ಹೋಟೆಲ್ ಗೆ ಹೋಗಿ ತಿಂಡಿ ತಿನ್ನಿ ಅಂತ ನಮ್ಮನ್ನ (ನಾನು + ರೋಹಿತ)ಓಡಿಸಿದಕ್ಕೆ...i mean ನೀವು ಹೊಲಿಯೋಕೆ ಕೊಟ್ಟ ಬಟ್ಟೆ ತಗೋಂಡು ಬರೋಕೆ ಹೋಗಿ,ಬರುವಾಗ ದಾರಿಯಲ್ಲಿ ಬೇಕಿದ್ರೆ ಬನ್ಸ್-ಭಾಜಿ ತಿಂದುಕೊಂಡು ಬನ್ನಿ ಅಂತ ಓಡಿಸಿದಕ್ಕೆ.
ಇದನ್ನ ಬರಿಯೋಣ ಅಂತ ಯಾಕೋ ಅನ್ನಿಸಿತು ಬರೆದೆ...
ಬರಿತಾ ಇರಬೇಕಾದ್ರೆ ರಾಜೀವ ping ಮಾಡಿದ್ರು ಅವ್ರು ಮೊನ್ನೆ ತಮ್ಮ ಪತ್ನಿ ಜೊತೆ ಜಪಾನ್ ನ disney world ಗೆ ಹೋದಾಗ ಭೂಕಂಪ ಆಯಿತಂತೆ.ಅದಕ್ಕೆ ನಾನಂದೆ ಗುರುವೇ "ಜೀವನದಲ್ಲಿ ಹೆಂಡತಿಗಿಂತ ದೊಡ್ಡ ಭೂಕಂಪ ಇಲ್ಲ" ಆಂತ ಬಲ್ಲವರು ಹೇಳಿದ್ದಾರೆ.ಎರಡೆರಡು ಭೂಕಂಪ ಸಹಿಸಿಕೊಂಡ ನೀವು gr8 ಅಂತ.

"ದಾಂಪತ್ಯ ಜೀವನ ಅಂದ್ರೆ ಎನು?ಮದುವೆ ಅಂದ್ರೆ ಅನುರಾಗದ ಅನುಬಂಧ ನಾ?ಅಲ್ಲಾ..world war 3ನಾ ?" ಅಂತ ಪ್ರಶ್ನೆ ಕೇಳಿದಾಗ ರೋಹಿತ್ ಉತ್ತರವನ್ನ ಹೀಗೆ ಕೆಳಗಿನ ಫೋಟೋದಲ್ಲಿ ಸೆರೆ ಹಿಡಿದೆ. "ಭಗವಂತ ಎನಪ್ಪಾ ನಿನ್ನ ಲೀಲೆ..." ಅಂತ ಹೇಳಿದಾಂಗೆ ಇತ್ತು. ನನಗೆ ಸರಿಯಾಗಿ ಎನು ಅಂದ್ರು ಅಂತ ಗೊತಾಗ್ಲಿಲ್ಲ. ಗೊತ್ತಾದ್ರೆ ನಂಗೂ ತಿಳಿಸಿ....

Tuesday, July 10, 2007

ಉತ್ತರಕನ್ನಡ ಜಿಲ್ಲೆಯು..ಶಿರಸಿ ಪೇಟೆಯು...ಅದರ ಜೀವನಾಡಿಯು

ಶಿರಸಿ - ನನ್ನ ಕಣ್ಣಿಗೆ ಕಂಡಂತೆ

ಕಳೆದ ವಾರಾಂತ್ಯ ಉತ್ತರಕನ್ನಡದ ಶಿರಸಿಗೆ ಹೋಗಿದ್ದೆ.ಶಿರಸಿ ಕರ್ನಾಟಕದ ಆಡಿಕೆ ಕೇಂದ್ರಗಳಲ್ಲಿ ಒಂದು.ಇಲ್ಲಿಯ ಜನರದ್ದು ಅಡಿಕೆ centered economy.ಅಡಿಕೆಗೆ ರೇಟ್ ಇದ್ರೆ ವ್ಯಾಪಾರ ವಹಿವಾಟು ಜೋರು,ಅದೇ ಅಡಿಕೆಗೆ ರೇಟ್ ಕಮ್ಮಿಅದ್ರೆ ವ್ಯಾಪಾರ ವಹಿವಾಟು ಥಂಡಾ. ಅಂದ ಹಾಗೆ ಉತ್ತರ ಪ್ರದೇಶದ ಮೊರಾದಬಾದ್ ಜಿಲ್ಲೆಯಲ್ಲಿ ಒಂದು ಸಿರ್ಸಿ ಅಂತ ನಗರ ಇದೆ.ಶಿರಸಿ ಸುತ್ತ ಹಸಿರನ್ನು ಹೊತ್ತು ನಿಂತಿರುವ ತಾಲೂಕು ಕೇಂದ್ರ. 'ಅಚ್ಚ ಕನ್ನಡ'ದಲ್ಲಿ ಹೇಳೋದಾದ್ರೆ ಮಲೆನಾಡಲ್ಲಿರುವ one of the sleepy town.ವರ್ಷದಲ್ಲಿ ಆರು ತಿಂಗಳು ಧಾರಾಕಾರ ಮಳೆ ಸುರಿದು,ಇನ್ನಾರು ತಿಂಗಳನ್ನ ಚಳಿಗಾಲ ಮತ್ತು ಬೇಸಿಗೆ ಹಂಚಿಕೊಂಡಿವೆ.ಮಲೆನಾಡಿನಲ್ಲಿ ಹೆದ್ದಾರಿಗಳಿಗಿಂತ ದೂರದಲ್ಲಿ ಗುಡ್ಡ ಕಾಡುಗಳ ನಡುವೆ ಇರುವ 5-6 ಮನೆಗಳಿರುವ ಹಳ್ಳಿಗಳೇ ಇರುವುದು.(ಈ ಮನೆ/ಹಳ್ಳಿಗಳಿಗೆ ಹೋಗುವುದೇ ಒಂದು ಟ್ರೆಕ್ಕಿಂಗ್ ಅಂತ ಬೆಂಗಳೂರಿಗರ ಹೇಳಿಕೆ.)ಆದರೆ ಇದೇ ಹಳ್ಳಿಗಳನ್ನ ,ಕಾಡು ಮೇಡು ,ಗುಡ್ಡ ಗದ್ದೆಗಳನ್ನ ಪೇಟೆಗೆ ಸಂಪರ್ಕಿಸುವ ಜೀವನಾಡಿಯೊಂದಿದೆ...ಆ ಜೀವನಾಡಿಯ ಹೆಸರೇ "ಬಜಾಜ್ M-80".

ಮನೆಗೆ ಒಂದು ಗಾಡಿ ಬೇಕು ಅಂದರೆ ಅದಕ್ಕೆ ಕೆಲವು criterion ಗಳು specific ಆಗಿ ಇರಬೇಕಾಗುತ್ತದೆ.
ತೀರಾ software ಭಾಷೆಯಲ್ಲಿ ಹೇಳೋದಾದ್ರೆ ಕೆಲವು requirement ಗಳು ಇರುತ್ತವೆ.
" ಹಿಂಡಿ,ಬೈಹುಲ್ಲು ,ಗ್ಯಾಸ್ ತರೊಕೆ ..., ಸೊಸೈಟಿಗೆ ಅಡಿಕೆ ,ಹಾಲು ತಗೊಂಡ್ ಹೊಪಲೆ..."
.. ಹೀಗೆ ಪೇಟೆಗೆ ಅಡಿಕೆ ಚೀಲ ತಗೊಂಡು ಹೋಗೋಕೆ, ಹಾಲು ಸೊಸೈಟಿ/KMFಗೆ ಹಾಲು ಒಯ್ಯಲಿಕ್ಕೆ...,ಮನೆಗೆ ದಿನಸಿ ,ಅಡುಗೆ ಗ್ಯಾಸ್ ತರುವುದಕ್ಕೆ, ಹಿಂಡಿ ತರುವುದಕ್ಕೆ.., ಹೀಗೆ ಎಲ್ಲಾದಕ್ಕೂ ಬೇಕಾದದ್ದು ಗಾಡಿ,ಕಲ್ಲು ಮಣ್ಣು,ಗದ್ದೆ ಗುಡ್ಡದ ದಾರಿಯಲ್ಲಿ ಸಂಚರಿಸಿದರೂ spare partಗಳು ಸಡಿಲಗೊಳ್ಳದಿರೋ ಗಾಡಿ,
ಎಲ್ಲ ಬೇಡಿಕೆಗಳನ್ನು ತೀರಿಸುವುದು ಒಂದೇ ಗಾಡಿ ..."ಬಜಾಜ್ M-80",ಒಂಥರಾ ಮಲೆನಾಡಿಗೆ ಹೇಳಿಮಾಡಿಸಿದ ಗಾಡಿ.
ಬೇಕಿದ್ರೆ ಶಿರಸಿಗೆ ಹೋಗಿ ಅಥವಾ ಉತ್ತರ ಕನ್ನಡದ ಯಾವುದೇ ಪೇಟೆಗೆ ಹೋಗಿ ನಿಂತ್ರೆ ನಿಮಗೆ minimum ನಿಮಿಷಕ್ಕೊಂದು "ಬಜಾಜ್ M-80" ಕಾಣಸಿಗುತ್ತದೆ. ಈಗ ಬೇರೆ ಬೇರೆ ಉತ್ತಮ ಗಾಡಿಗಳು ಬಂದರೂ M-80 ಮಾತ್ರ ಅದರ ರಾಜ ಮರ್ಯಾದೆಯ ಸ್ಥಾನ ಬಿಟ್ಟುಕೊಟ್ಟಿಲ್ಲ.
ನಾನು ಹೀಗೆ ಮಾತನಾಡುತ್ತ ಗಾಡಿಗಳ ಬಗ್ಗೆ ಕೇಳಿದಾಗ "ತಮ್ಮಾ..ಆನು 12 ವರ್ಷದಿಂದ ಈ ಗಾಡಿ ಹೊಡೀತಾ ಇದ್ದೆ.. ಎನೂ ತೊಂದ್ರೆ ಕೊಟ್ಟಿದಿಲ್ಲೆ.." ಅಂತಾ M-80 ಹೊಗಳುವ ಹಿರಿಯರು ಬಹಳ ಜನ ಸಿಕ್ಕಿದರು.
ಯಾಕೋ ರೋಹಿತನಹತ್ರ ಕೇಳಿದರೆ "ಯಜಮಾನ್ರೇ..ಈ world ಅಲ್ಲಿ highest number of M-80 ಇರೋದೇ ಉತ್ತರ ಕನ್ನಡದಲ್ಲಿ, ವಿಶ್ವದಲ್ಲಿ ಅತ್ಯಂತ ಹೆಚ್ಚು M-80 ಇರೋ ಗಿನ್ನಿಸ್ ರೆಕಾರ್ಡ್ ನಮ್ಮದೇ .ಬೇಕಾದ್ರೆ ನೋಡಿ ಬೆಂಗಳೂರಿಗೆ ಇಲ್ಲಾಂದ್ರೆ ಉತ್ತರ ಕನ್ನಡದ ಹೊರಗೆ ಬೇರೆ ಯಾವುದಾದರು ಊರಿಗೆ ಹೋಗಿ ಅಲ್ಲಿ ಎಲ್ಲಾದ್ರು M-80 ಕಂಡ್ರೆ ಅದರ number ನೋಡಿ KA-31 ..ಅಂತಾ ಸ್ಟಾರ್ಟ್ ಆಗೊತ್ತೆ" ಅಂತ ಹೇಳಿದ.
ಅವಾಗ ನಾನು ಯೋಚನೆಗೆ ಬಿದ್ದೆ, ಬಜಾಜ್ ಕಂಪನಿಯವರು ಬೇರೆ ಕಡೆ M-80 manufacture ಯಾಕೆ ಮಾಡಬೇಕು.ಸುಮ್ನೆ ಶಿರಸಿಲೋ ಇಲ್ಲಾಂದ್ರೆ ಉತ್ತರಕನ್ನಡದಲ್ಲಿ ಎಲ್ಲಾದ್ರು M-80 manufacture ಮಾಡಿದ್ರೆ ಅವರ transport cost ಕಮ್ಮಿ ಆಗೊಲ್ವ. ಭಾರತದಲ್ಲಿ ತಯಾರಾಗೋ 40% M-80 ಉತ್ತರಕನ್ನಡದಲ್ಲಿ ಸೇಲ್ ಆದರೂ ಸಾಕು ತಾನೇ ಅವರ ಖರ್ಚು ಕಮ್ಮಿ ಮಾಡೋಕೆ .ಬೇರೆ ಕಡೆಯಿಂದ order ಬಂದ್ರೆ ಇಲ್ಲಿಂದ ಕಳಿಸಿದ್ರಾಯಿತು ಅಂತ ಯೋಚಿಸುತ್ತಿದ್ದೆ. ಆಗ ನನಗೆ ಅನ್ನಿಸಿತು ನಾವು software ಜನ ಯಾವುದಕ್ಕೆ ಬೇಕೋ ಅದಕ್ಕೆ ಬಿಟ್ಟು ಎಲ್ಲಾದಕ್ಕೂ logic ಹಾಕ್ತಾರೆ.


ಆದ್ರೆ ಎನೇ ಹೇಳಿ ಶಿರಸಿಯ ಜನರನ್ನು ಮಾತ್ರ ಮೆಚ್ಚಬೇಕು.ರಸ್ತೆ ಇರುವುದು ಪಾದಾಚಾರಿಗಳ ಓಡಾಟಕ್ಕೆ ಅಂತ ಅವರು ದೇಶಕ್ಕೆ ತೋರಿಸಿಕೊಟ್ಟಿದ್ದಾರೆ.
ಯಾಕೋ ಶಿರಸಿಯಲ್ಲಿ drive ಮಾಡಬೇಕಿದ್ರೆ ಜನ ರಸ್ತೆಯಲ್ಲಿ ಇದ್ದಾರೆ ಅಂತ ನೀವು ಹಾರ್ನ್ ಬಾರಿಸಿದ್ರೋ ಅದು ನಿಮ್ಮ ಗ್ರಹಚಾರ . ನೀವು ನಿಂತು ಹತ್ತು ಹನ್ನೆರಡು ಹಾರ್ನ್ ಬಾರಿಸುತ್ತಿದ್ದರೂ ಜನ ಮಾತ್ರ ಎನೂ ಅಗಿಲ್ಲ ಅನ್ನುವ ಹಾಗೆ"ಅಲ್ದಾ ಭಾವ, ಮೊನ್ನೆ ಯಂತಾ ಮಳೆ.." ಅಂತಾ ತಮ್ಮ ಪಟ್ಟಾಂಗ ಮುಂದುವರಿಸುತ್ತಾ ತಮ್ಮ ಪಾಡಿಗೆ ಎನೂ ಅಗಿಲ್ಲ ಅನ್ನೋ ತರಹ ಮುನ್ನಡೆಯುತ್ತಾರೆ.
ಶಿರಸಿ ಗೆ ಕಾಲಿಟ್ಟ ಕ್ಷಣದಿಂದ ಯಾಕೋ ಪುತ್ತೂರು ನೆನಪಾಗ ತೊಡಗಿತ್ತು.ಧಾರಾಕಾರವಾಗಿ ಸುರಿಯುತ್ತಿರುವ ಮಳೆ, ರಸ್ತೆಗೆ ಆಂಟಿಕೊಂದಿರುವ ಅಂಗಡಿಗಳು (correct ಆಗಿ ಹೇಳೂದಾದ್ರೆ ಅಂಗಡಿಗಳಿಗೆ ಅಂಟಿಕೊಂಡಿರುವ ಕಿರಿದಾದ ರಸ್ತೆಗಳು), ಆ ಪೇಟೆಯಲ್ಲಿ ಗಾಡಿ ಓಡಿಸಲು ಮಾಡಬೇಕಾದ ಹೋರಾಟಗಳು...
ಎನೋಪ್ಪಾ ಕುಮಾರಣ್ಣ ಮೊನ್ನೆ ಶಿರಸಿಗೆ ಬಂದಿದ್ದಾಗ ಶಿರಸಿ ಜಿಲ್ಲೆ ಮಾಡುವುದಾಗಿ ಹೇಳಿದ್ದಾರಂತೆ. ಸುಮ್ನೆ ಜಿಲ್ಲೆ ಮಾಡೋ ಬದಲು ಜನರಿಗೆ ಅಲ್ಲಿ ಎನು ಮೂಲಭೂತ ಅಗತ್ಯಗಳು ಬೇಕಾಗಿದೆಯೋ ಅದು ಮಾಡಿಕೋಡಿ ಸಾಕು.
ನೀವು ಜಿಲ್ಲೆ ಮಾಡಿ ಮಾಡದೇ ಇರಿ ..ಅದರೆ ಉತ್ತರ ಕನ್ನಡ ಜಿಲ್ಲೆಯಲ್ಲಿ ..ಶಿರಸಿ ಪೇಟೆಯಲ್ಲಿ ..M-80 ಗಳು ಮಾತ್ರ ತಮ್ಮ ಪಾಡಿಗೆ ತಾವು ಓಡಾಡಿಕೊಂಡಿರುತ್ತವೆ,ರಸ್ತೆಯಲ್ಲಿ ನಡೆಯುತ್ತಿರುವ ಪಾದಾಚಾರಿಗಳು ಅವಕ್ಕೆ ದಾರಿ ಕೊಟ್ರೂ..ಕೊಡದಿದ್ದರೂ...

Friday, June 22, 2007

ಮುಂಗಾರುಮಳೆಯೂ..... ಯಕ್ಷಗಾನವೂ...


ನಿನ್ನೆ ನನ್ನ ಗೆಳೆಯನೊಂದಿಗೆ ಮಾತನಾಡುತ್ತಾ ಮುಂಗಾರುಮಳೆ ಯಕ್ಷಗಾನದ ಬಗ್ಗೆ ತಿಳಿಯಿತು.
ಯಾವ ಪ್ರಸಂಗಕರ್ತ ಇಷ್ಟು ಕೆಳಗಿಳಿದು ಸೂಪರ್ ಹಿಟ್ ಚಿತ್ರವನ್ನ ಯಕ್ಷಗಾನಕ್ಕೆ ಅಳವಡಿಸಬಹುದು ಎಂದು ನಾನು ಅಂದುಕೊಂಡಿದ್ದೆ.ಆಮೇಲೆ ಆ ಪ್ರಸಂಗಕರ್ತ ದೇವದಾಸ್ ಈಶ್ವರಮಂಗಲ ಅಂತ ಮೇಲೆ ಯಾವುದೇ ಸಂದೇಹ ಉಳಿಯಲಿಲ್ಲ,ಆ ಮನುಷ್ಯ ಮಲೆಯಾಳಿ ಸುಂದರಿಯರ ಯಾವುದಾದರೂ ಸೂಪರ್ ಹಿಟ್ "ದೇವರ ಚಿತ್ರ" ಗಳನ್ನ ಯಕ್ಷಗಾನಕ್ಕೆ ಆಳವಡಿಸದಿರಲಿ ಎಂಬುದೇ ದೇವರಲ್ಲಿ ನನ್ನ ಪ್ರಾರ್ಥನೆ .

ಈ ದೇವದಾಸ್ ಈಶ್ವರಮಂಗಲ ಅವರು ಹಿಂದೆ ಆಪ್ತಮಿತ್ರ ದ ಕಥೆಯನ್ನ ಬಳಸಿ "ನಾಗವಲ್ಲಿ" ಎಂಬ ಪ್ರಸಂಗ ಬರೆದಿದ್ದರು.ಅದು ಯಕ್ಷಗಾನದಲ್ಲಿ ಸೂಪರ್ ಹಿಟ್ ಕೂಡ ಆಯಿತು.ಈಗ ಶ್ರೀಯತರು ಮುಂಗಾರು ಮಳೆಯನ್ನ "ಪ್ರೇಮಾಭೀಷೇಕ"ವಾಗಿ ತಂದಿದ್ದಾರೆ.
ಮುಂಗಾರು ಮಳೆಯ ನಂದಿನಿ ಮತ್ತು ಪ್ರೀತಮ್ ಈಗ ರಂಗ ಸ್ಥಳಕ್ಕಾಗಿ ಪ್ರೇಮ ಮತ್ತು ಅಭಿಷೇಕ ಆಗಿದ್ದಾರೆ.
ಭಾಗವತರ ಕೈಲಿ "ಅನಿಸುತಿದೆ ಯಾಕೋ ಇಂದು .." ಹಾಡಿನ ಎರಡು ಲೈನ್ ಕೂಡ ಹಾಡಿಸಿದ್ದಾರೆ ಅಂತೆ.
ಎನೋ ಅಪ್ಪಾ ಆ ಮನುಷ್ಯನಿಗೆ ಯಕ್ಷರಂಗದ "ಎಸ್.ನಾರಾಯಣ್" ಎಂಬ ಬಿರುದು ಕೊಡಬಹುದು ಅಲ್ವಾ.

ಮೊನ್ನೆ ಜೂನ್ 12ರಂದು ಅನ್ನಿಸುತ್ತೆ, ಉಡುಪಿಯಲ್ಲಿ ಪ್ರೇಮಾಭೀಷೇಕ ಪ್ರಸಂಗವಿತ್ತು.ಕಲೆಕ್ಷನ್ ಚೆನ್ನಾಗಿತ್ತಂತೆ.
ಎನೋ ಜನ ಕುತೂಹಲಕ್ಕೆ ಬಂದಿರಬಹುದು .ದೇವದಾಸ್ ಈಶ್ವರಮಂಗಲ ಎನು ಬರೆದರೂ ಅದನ್ನ ಆಡಿಸ ಹೊರಟ "ಮಂಗಳಾದೇವಿ ಮೇಳ"ದ ವ್ಯವಸ್ತಾಪಕರಿಗಾದ್ರೂ ತಲೆ ಬೇಡ್ವಾ? ಕಾಸು ಹುಟ್ಟತ್ತೆ ಅಂತ ಎನು ಬೇಕಾದ್ರೂ ಪ್ರಸಂಗ ಆಡಿಸೋದಾ?
ಕೆರೆಮನೆಯವರು ಯಾವುದಕ್ಕೋ "ಸಾಂಸ್ಕೃತಿಕ ಅಪರಾಧ" ಅಂದಿದ್ದು ನೆನಪಾಗುತ್ತಿದೆ.ಬಹುಶ ಇದನ್ನು ಆ categoryಗೆ ಹಾಕಬಹುದು

ಆದರೆ ಇದು ಯಾಕೋ ನಂಗೆ ಸರಿ ಕಾಣ್ತಾ ಇಲ್ಲ.
ಇನ್ನು ಎನಿದ್ರೂ ಯಕ್ಷ ಪ್ರೇಮಿಗಳುಂಟು..ಯಕ್ಷ ಗಾನವುಂಟು ಎಂದು ಸುಮ್ನಿರಬೇಕಷ್ಟೆ ಅಲ್ವಾ..
ಸುಮ್ನಿರೊಕೆ ಮನಸು ಒಪ್ತಾ ಇಲ್ಲ ...
ನಮ್ಮದೀನಿದ್ರು ಪ್ರಸಂಗ ಬರಿಯುವವರಿಗೂ,ಪ್ರಸಂಗ ಆಡಿಸುವವರಿಗೂ ಒಳ್ಳೆ ಬುದ್ಧಿ ಬರಲಿ,ಯಕ್ಷ ಪ್ರೇಮಿಗಳಿಗೆ ಯಕ್ಷಗಾನ ಮುದ ಕೊಡಲಿ ,ಯಕ್ಷಗಾನ ಕಲೆ ಬೆಳೆಯಲಿ ಅಂತ ಹಾರೈಕೆ.
ಎನೋ ಬರುವ ತಿರುಗಾಟಕ್ಕೆ "ಮಂಗಳಾದೇವಿ ಮೇಳ"ದ್ದು ಹೊಸ ಪ್ರಸಂಗ ಅಂತೆ "ದೇವದಾಸ್ ಈಶ್ವರಮಂಗಲ " ವಿರಚಿತ "ಶಿವಾಜಿ"...ಹೌದಾ?

Friday, June 15, 2007

ಮತ್ತೆ ಮಳೆ ಹುಯ್ಯುತಿದೆ ..ಎಲ್ಲಾ ನೆನಪಾಗುತಿದೆ...


ಈ photo ನಾವು second year ಅಲ್ಲಿ ಇದ್ದಾಗ ತೆಗೆದದ್ದು

ಜೂನ್ 15 2005 : ಮಾಧ್ವ ಹಾಸ್ಟೆಲ್ , ಮೈಸೂರು.
--------------------------------
ಬೆಳಗ್ಗೆ 3 ಘಂಟೆಗೆ ಎದ್ದು ಎಲ್ಲಾರು ಸ್ನಾನ ಮಾಡುತ್ತಾ ಇದ್ವಿ.ಹಾಸ್ಟೆಲ್ ನಲ್ಲಿ ನಮ್ಮದು ಸಮೂಹ ಸ್ನಾನ ಅಂದ್ರೆ ಒಂದು ನಳ , ಒಂದು ಬಕೆಟ್ , 5-6 mug, ಸುತ್ತಲು ಸ್ನಾನಕ್ಕಿಳಿದಿರುವ 6-10 ಮಂದಿ .ಬಹುಶ ಪ್ರಾಚೀನ ರೊಮನ್ನರ ನಂತರ MH ನ ಹುಡುಗರೇ ಇರಬೇಕು ಸಮೂಹ ಸ್ನಾನದ ಕಲ್ಪನೆಗೆ ಒಂದು ಅರ್ಥ ಕೊಟ್ಟಿದ್ದು. ಜಪಾನಿನಲ್ಲಿ ಕುಟುಂಬಗಳ ಸಮೂಹ ಸ್ನಾನವಿದೆ ಅಂತ ಓದಿದ್ದೆ.
ಯಾವಾಗಲೂ ನಾವು ಸ್ನಾನಕ್ಕೆ ಹೋದಾಗ ಹಾಡುಗಳ ಸುರಿಮಳೆ.ನಾವು ಭೀಕರವಾಗಿ ಹಾಡುತ್ತಿದ್ದೆವು. ದಿನಾ ಒಬ್ಬೊಬ್ಬ ನಟನನ್ನ ಆಯ್ಕೆ ಮಾಡಿ ಅವರ special ಹಾಡುಗಳು ಹಾಡುತ್ತಿದ್ವಿ.ಅಣ್ಣಾವ್ರು,ವಿಷ್ಣು,ಅಂಬರೀಶ್,ಶಂಕ್ರಣ್ಣ,ಅನಂತ್ ಎಲ್ಲರಿಗಿಂತ ಮುಖ್ಯವಾಗಿ ನಮ್ಮೆಲ್ಲರ ಗುರು "ರವಿಮಾಮ", ಜಗ್ಗುದಾದಾ ಹೀಗೆ ಎಲ್ಲರ special ನಡಿತಿತ್ತು.ಅದರಲ್ಲು ನಮ್ಮ ಶ್ರೀ ವಲ್ಲಭಂಗೆ ಬರಿತ್ತಿದ್ದದ್ದೇ ಒಂದು ಹಾಡು ಎಂಬಂತೆ ಯಾವ ಹೀರೊ ಹೆಸರು ಹೇಳಿದರೂ "ಎಲ್ಲಿರುವೇ ..ಮನವ ಕಾಡುವ ರೂಪಸಿಯೇ .." ಅಂತ ಶುರು ಹಚ್ಚುತ್ತಿದ್ದ. (ಅಂದ ಹಾಗೆ ಅವನ ಮನವ ಕಾಡುವ ರೂಪಸಿಯನ್ನ ಅವನ ತಂದೆ ತಾಯಿ ದೂರದ ಚೆನ್ನೈಯಲ್ಲಿ ಹುಡುಕಿದ್ದು ..ಅಕ್ಟೋಬರ್ 29,2007 ಕ್ಕೆ ಅವರಿಬ್ಬರೂ "ಮದುವೆಯ ಈ ಬಂಧ ಅನುರಾಗದ ಅನುಬಂಧ ..." ಅಂತ ಹಾಡುತ್ತಾ ಗೃಹಸ್ಥಾಶ್ರಮಕ್ಕೆ ಕಾಲಿಡುತ್ತಾರೆ ..congrats ಕಣೋ ವಲ್ಲಭ ..ಆದ್ರೆ ವಲ್ಲಭ ಅವರು ತಮ್ಮ ಸುಮಧುರವಾದ ಕಂಠದಲ್ಲಿ "ಎಲ್ಲಿರುವೇ ..ಮನವ ಕಾಡುವ ರೂಪಸಿಯೇ .." ಈಗ ಹಾಡುತ್ತಾ ಇಲ್ವಂತೆ ಯಾಕೋ ? )
ಆದ್ರೆ ಆ ದಿನ ಯಾರೂ ಮಾತಾಡ್ತಿರ್ಲಿಲ್ಲ ..ಹಾಸ್ಟೆಲ್ ನ ಭಾಷೆಯಲ್ಲಿ ಹೇಳಬೇಕು ಅಂದ್ರೆ "... ಮುಚ್ಕೊಂಡು ಸ್ನಾನ ಮಾಡ್ತಿದ್ವಿ". ನಮಗೆ ಗೊತ್ತಿತ್ತು ಹಾಸ್ಟೆಲ್ ನ ಹುಡುಗರಾಗಿ ಇದು ನಮ್ಮ ಕೊನೆ ಸ್ನಾನ . ಯಾಕೆಂದ್ರೆ ನಾವು ಆ ದಿನ ಬೆಳಗ್ಗೆ 4:30ಕ್ಕೆ ಹಾಸ್ಟೆಲ್ ಖಾಲಿ ಮಾಡುತ್ತೇವೆ ಎಂದು ನಿಶ್ಚಯಿಸಿದ್ವಿ. ಹಿಂದಿನ ದಿನ ನಮ್ಮೆಲ್ಲ Luggage ಅನ್ನು VRLನಲ್ಲಿ ಹಾಕಿ ಆಗಿತ್ತು.
ಸೆಪ್ಟೆಂಬರ್ 23 2001 ಕ್ಕೆ ಶುರುವಾಗಿದ್ದ ನಮ್ಮ "ಹಾಸ್ಟೆಲ್ ಪರ್ವ" ಅಂತಿಮ ಹಂತಕ್ಕೆ ಬಂದಿತ್ತು.
ಎಲ್ಲಾರ ತರಹ ಹಾಸ್ಟೆಲ್ ಬಿಡದೆ different ಆಗಿ ಹಾಸ್ಟೆಲ್ ಬಿಡೋ ಸ್ಕೆಚ್ ಹಾಕಿದ್ವಿ.trekking, bike tripಗೆ famousಆದ ನಾವು
ಬೈಕ್ ನಲ್ಲಿ ಮೈಸೂರು to ಮನೆಗೆ ಹೋಗೊದು ಅಂತ decide ಮಾಡಿದ್ವಿ.
(ಅಂದ ಹಾಗೆ ನಮ್ಮ batch ಮೊದಲ trek : K P Dream ಬಗ್ಗೆ ಓದಲು ಪ್ರಾಣಿಯ ಬ್ಲಾಗ್ಗೆ ಹೋಗಿ)
ಎಲ್ಲಾ ಮುಗಿಸಿ ಎಲ್ಲರನ್ನು ಎಬ್ಬಿಸ್ತಾ ಅವ್ರಿಗೆ goodbye ಹೇಳಿ ಹೊರಡ್ತಾ ಇದ್ವಿ. ಯಾಕೋ sudden ಅಗಿ ರಾಕೇಶ ಎಲ್ಲರನ್ನು ತಬ್ಬಿ ಅಳತೊಡಗಿದ.
ಮೊದಲೇ ಎಲ್ಲ್ಲಾ ವಿಚಿತ್ರವಾದ ಬೇಸರದಲ್ಲಿ ಇದ್ದ ನಾವು ಎಲ್ಲರ ಕಣ್ಣಲ್ಲಿ "ಗಂಗವ್ವ ಗಂಗಾಮಾಯಿ" ಇಳಿದು ಬರತೊಡಗಿತು.

4 ವರ್ಷ ಎನೆಲ್ಲಾ ಕೂಳೆ (ಮಜಾ)ಮಾಡಿದ Dream Boyz ಅಲಿಯಾಸ್ Koole2k5 , ಹಾಸ್ಟೆಲ್ ಬಿಟ್ಟು ಹೊರಟು ನಿಂತಿದ್ವಿ.
ಅಂದ ಹಾಗೆ Dream Boyz ಅಂತ ಹಾಸ್ಟೆಲ್ದೇ ಅಂತ ತಂಡ ಕಟ್ಟಿ college festಗಳಲ್ಲಿ ಭಾಗವಹಿಸುತ್ತಿದ್ವಿ.ಹೆಚ್ಚಿನ ಕಡೆ prize ಗೆದ್ದಿದ್ವಿ.ಇನ್ನೂ ಆ skit,MAD ad ಗಳ scriptಗಾಗಿ ನಾವೆಲ್ಲರೂ ಕೂತು ಕತೆ ಹೆಣಿತಿದ್ದ ಸ್ವಾರಸ್ಯ ಹೇಳಲು ಹೊರಟರೆ ಅದಕ್ಕೆ ಇನ್ನೋಂದು ಬ್ಲಾಗ್ ಬೇಕು.
ಅದನ್ನ ಇನ್ನೊಂದು ಸಲ ಬ್ಲಾಗಿಸುತ್ತೇನೆ.


4 ವರ್ಷ 24 ಘಂಟೆ ಜೊತೆಗಿದ್ದ ನಾವು ಇನ್ನುಮುಂದೆ ತಿಂಗಳಿಗೊಮ್ಮೆ ಸಿಗುವುದು ಅಪರೂಪ ಅಂತ ಗೊತ್ತಿತ್ತು. ಯಾಕೋ ಹಾಸ್ಟೆಲ್ ಬಿಟ್ಟು ಇವತ್ತಿಗೆ 2 ವರ್ಷ ಆಗಿದ್ದರೂ ಮನಸ್ಯಾಕೋ ಇನ್ನು ಎಲ್ಲಾ batch mate ಜೊತೆ ಹಾಸ್ಟೆಲ್ ಅಲ್ಲೆ ಇದೆ.
ಇದೆಲ್ಲಾ ಯಾಕೆ ನೆನಪಾಯಿತು ಅಂತೀರಾ ಪ್ರಾಣಿ ಅಲಿಯಾಸ್ ಪ್ರಾಣೇಶ ಮೊನ್ನೆ
"one fine day we will all get busy with ourlives ,long working hours ,no more classes,lecturers, hostel fud,frnds n sms, won't hav time 4 ourselves,@ such a day u'll luk outsideur window n see d gud old memories flash u by n u'll get a smile with a tear in ur eyes n u'll turn bak 2 ur work thinkin u could go bak. TO all my friends who helped increating such memories .love u all Its 2 years 4 today ,that v finished 8th semester BE exams,n moved on..."
ಅಂತ ಸ.ಮೋ.ಸ (ಸರಳ ಮೋಬೈಲ್ ಸಂದೇಶ) ಕಳಿಸಿದ್ದ (thanks ರಾಜೀವ್ ಮತ್ತು ರೋಹಿತ್ ಶಬ್ದ ಎರವಲು ತಗೋಳೋ ಎಂದು ಕೊಟ್ಟಿದ್ದಕ್ಕೆ)
ಆ ಸ.ಮೋ.ಸ ಓದಿ ಒಸಿ flash back ಗೆ ಹೋದೆ.

ಆ ದಿನ ಜೂನ್ 15 2005 ಬೆಳಗ್ಗೆ 5 ಘಂಟೆಗೆ ಹಾಸ್ಟೆಲ್ ಬಿಟ್ಟ ನಾವು . ಹುಣಸೂರು ತನಕ ಯಾರೂ ಪರಸ್ಪರ ಮಾತಾಡಿರಲಿಲ್ಲ. ಎಲ್ಲ ಬಿಕ್ಕಳಿಸುತ್ತಾ ಕಣ್ಣೀರು ವರ್ಸ್ಕೋತಾ ಇದ್ವಿ. ಎಲ್ಲಾರೂ ಬಿಡಿ ನಾನು almost ಒಂದು ಘಂಟೆ ಮಾತಾಡಿರ್ಲಿಲ್ಲ ಅನ್ನೋದೆ ..ನಮ್ಮ ಹುಡುಗರು 8ನೇ ಅದ್ಭುತ ಇನ್ನೂ ತಿಳ್ಕೊಂಡಿದ್ದಾರೆ.
ಹುಣಸೂರಿನಲ್ಲಿ ಚಾಯ್ ಕುಡಿದು , ಮಡಿಕೇರಿ, ಸುಳ್ಯ ಅಂತ ಚಾಯ್ stop ಕೊಟ್ಟು, ಪುತ್ತೂರಿಗೆ ಬೆಳಗ್ಗೆ 9 ಘಂಟೆಗೆ ಬಂದಾಗ ...
ಮನೆಯಲ್ಲಿ ಬಿಸಿ ಬಿಸಿ ನೀರುದೋಸೆ,ಅನಾನಾಸಿಸ ಕ್ಷೀರ (ತೀರಾ ಮೈಸೂರು style ನಲ್ಲಿ ಹೇಳೋದಾದ್ರೆ Pineapple ಕೇಸರಿಬಾತ್ ), ಕಾಯಿ ಚಟ್ನಿ ready ಇತ್ತು....
ಅದನ್ನ ಸ್ವಾಹಾ ಮಾಡಿದ ಮೇಲೆ ಎಲ್ಲಾರು ಉಡುಪಿ ಕಡೆ ಹೊರಟ್ವಿ..ಅದೂ ವಯಾ ಬಂಟ್ವಾಳ...ಹಂಗೆ ಬಂಟ್ವಾಳದಲ್ಲಿ ಅಶೋಕನ ಮನೆಲಿ ಚಾಯ್ stop...ನಂತರ ಉಳಿದವರು to ಉಡುಪಿ ನಾನು back to ಪುತ್ತೂರು....

ಈಗ ಯಾಕೋ ಈ ವಿಷಯ ಬರೆಯುವಾಗ ಮನಸ್ಸಿಗೆ ಬೇಜಾರು ಆಗ್ತಿದೆ...
boyz ನ ಮೀಟ್ ಆಗಿ 6 ತಿಂಗಳಾಗುತ್ತಾ ಬಂತು ...
ಈ week end ಬೆಂಗಳೂರಿಗೆ ... boyz ನ ಮೀಟ್ ಅಗೋಕೆ . ಚಿಂಟು ಗೆ ಯಾವುದಾದ್ರು film ಗೆ ticket ತೆಗಿಯೋಕೆ ಹೇಳ್ಬೇಕು.
--------
ಹಾಸ್ಟೆಲ್ ನಲ್ಲಿ ನಡೆದ ನಮ್ಮ ಕಥೆಗಳನ್ನ "ಹಾಸ್ಟೆಲ್ ಹರಿಕಥೆ" ಅಂತ ಬ್ಲಾಗಿಸೋ ಮನಸು ಇದೆ.ಸಾಧ್ಯ ಆದ್ರೆ ಇನ್ನು ಮುಂದೆ ಮೈಸೂರಿನಲ್ಲಿ ನಾವು ಮಾಡಿದ ಅವಾಂತರಗಳೆಲ್ಲ "ಹಾಸ್ಟೆಲ್ ಹರಿಕಥೆ"ರೂಪದಲ್ಲಿ ಬ್ಲಾಗಂಬರಿ (ಬ್ಲಾಗ್+ ಕಾದಂಬರಿ) ಆಗಿ ಬರಿತೇನೆ.


ಈ photo ಕಳೆದ 2006ರ ಮೇ ತಿಂಗಳಲ್ಲಿ ನಾವು ಹಾಸ್ಟೆಲ್ ಬಿಟ್ಟು ಒಂದು ವರ್ಷ ಆಯಿತು ಅಂತ ಶಿವಮೊಗ್ಗ ಜಿಲ್ಲೆಯಲ್ಲಿ (ಮುಪ್ಪಾನೆ,ಜೋಗ,ದಬ್ಬೆ ಜಲಪಾತ) 3 ದಿನದ trek ಹೋಗಿದ್ದಾಗ ತೆಗೆದದ್ದು. photo ತೆಗಿಯೋವಾಗ frame ಅಲ್ಲಿ ನಮ್ಮನ್ನು ಮೂಲೆಗೆ ದೂಡಿದ ರಾಕೇಶನ scientific photgraphy ಗೆ thanx

Monday, June 04, 2007

ಹಾಗೆ ಸುಮ್ಮನೆ ಓದಿದೆ

ಮೊನ್ನೆ ಊರಿಗೆ ಹೋಗಿದ್ದಾಗ ಕನ್ನಡದ ಮೃಗಯ (ಬೇಟೆ) ಸಾಹಿತ್ಯ ಒದೋ ಅವಕಾಶ ಸಿಕ್ತು .
ಬಹಳ ದಿನಗಳ ನಂತರ ನನ್ನ favorite ಅತ್ರಿ ಬುಕ್ ಹೌಸ್ (ಗೊತ್ತಿಲ್ಲದವರಿಗೆ : ಅತ್ರಿ ಬುಕ್ ಹೌಸ್ , ಬಲ್ಮಠ, ಮಂಗಳೂರು)ಗೆ ಹೋಗಿದ್ದೆ.
ಅಲ್ಲಿ ನಾನು ಬಹಳ ದಿನದಿಂದ ಹುಡುಕುತ್ತಿದ್ದ ಪುಸ್ತಕ ಸಿಕ್ಕಿತು : "ಬೇಟೆಯ ನೆನಪುಗಳು" - ಕೆದಂಬಾಡಿ ಜತ್ತಪ್ಪ ರೈ .
ಜೊತೆಗೆ ಪ್ರಭಾಕರ ಶಿಶಿಲ ಬರೆದ "ಸದ್ದಡಗಿದ ಶಿಕಾರಿ ಕೋವಿ- ಬಡ್ಡಡ್ಕ ಅಪ್ಪಯ್ಯ ಗೌಡರ ಅನುಭವಗಳು" ಸಿಕ್ಕಿತು .
ನಾನು ಎರಡು ವರ್ಷ ಹಿಂದೆ ಪುತ್ತೂರಿನ ರದ್ದಿ ಅಂಗಡಿಯಲ್ಲಿ "ಬೇಟೆಯ ದಿನಗಳು" -ಕೈಂತಜೆ ವಿಷ್ಣು ಭಟ್ಟ ಖರೀದಿಸಿದ್ದೆ. ಓದಿದ್ದೆ.
ಮೊನ್ನೆ ಊರಲ್ಲಿ ಕೂತು ಒಂದು ಗುಕ್ಕಿನಲ್ಲಿ ಈ 3 ಪುಸ್ತಕ ಓದಿದೆ....
ಇವನ್ನೆಲ್ಲಾ ಮುಗಿಸಿ "ಮಲೆಗಳಲ್ಲಿ ಮದುಮಗಳು" ಮುಗಿಸಿದೆ.
ಅದಾದ ಕೂಡಲೆ ವಿಠ್ಠಲ ವೆಂಕಟೇಶ ಕಾಮತ್ "ಇಡ್ಲಿ ಒರ್ಕಿಡ್ ಮತ್ತು ಆತ್ಮಬಲ"ದ ಬಗ್ಗೆ ಹೇಳುತ್ತಿದ್ದರು.
ಜಿ.ಎಸ್.ಸದಾಶಿವರವರು ಅವರ "ಇದುವರೆಗಿನ ಸಮಗ್ರ ಕಥೆಗಳು" ಹೇಳುತ್ತಿದ್ದರು.
ನಾ.ಡಿಸೋಜಾ ರ ಹೊಸ ಕಥಾ ಸಂಕಲನ "ಗಿಳಿಯೇ ಓ ಗಿಳಿಯೇ" ಓದಿದೆ.
ಭಾಸ್ಕರ ಹೆಗ್ಡೆ "ಸುನಿತಾಗೆ ಮಲ್ಲಿಗೆ ಅಂದ್ರೆ ಇಷ್ಟ " ಅಂತ ಬರ್ದಿದ್ರು ,ಓದಿದೆ.
ಮನೆಯಲ್ಲಿ ಒಂದು ವಾರ ಕೂತು ಪರೀಕ್ಷೆಗೆ ಓದುವಂತೆ ಪುಸ್ತಕ ಓದಿದೆ.
ನಾನು ಒಂದು ಕೈಯಲ್ಲಿ ಮಾವಿನ ಹಣ್ಣು ಹಿಡಿದು ಒಂದು ಕೈಲಿ ಪುಸ್ತಕ ಹಿಡಿದು ಓದುವುದು ನೋಡಿ ಅಮ್ಮ "ಈ ತರ ಎಲ್ಲಾದ್ರು SSLC ಪರೀಕ್ಷೆಗೆ ಓದಿದ್ರೆ ನಿಂಗೆ first rank ಬತ್ತಿತ್ತು " ಅಂದ್ರು.

ಆದ್ರೂ office ಗೆ ರಜೆ ಹಾಕಿ ಮನೆಲಿ ಕೂತು ಪುಸ್ತಕ ಓದುವುದರಲ್ಲಿ ಒಂಥರಾ ಮಜಾ ಇದೆ... ಏನನ್ತೀರಾ?

ಅಂದ ಹಾಗೆ ಯಾರಾದ್ರು ಕೆದಂಬಾಡಿ ಜತ್ತಪ್ಪ ರೈ ಯವರ ಬೇಟೆಯ ನೆನಪು ಪುಸ್ತಕದ online ಆವೃತ್ತಿ ಓದಬೇಕು ಅಂತಿದ್ದರೆ
ಇಲ್ಲಿಗೆ ಹೋಗಿ

Thursday, April 26, 2007

ಮಾವು..ಮ್ ಮ್ ಮ್...ಮಾವು..


ಮೊನ್ನೆ ಆಮ್ಮ phone ಮಾಡಿದಾಗ...
"ಮಗೋ..ನಿನ್ನ ಬಾಬ್ತು ಹೇಳಿ 300 ಮಿಡಿ ಹಾಕಿದ್ದೆ.ಒಟ್ಟು ಸುಮಾರು 1000 ಮಿಡಿ ಹಾಕಿದ್ದೆ october ಹೊತ್ತಿಗೆ ಉಪ್ಪು ಖಾರ ಹಿಡಿದಿರ್ತು. ಬಂದಾಗ ತೆಕೊಂಡುಹೋಪಲೆ ಮರೆಯಡ"
(sorry ಅಮ್ಮನ ಈ ಮಾತು ಹವ್ಯಕದಲ್ಲೆ ಬರೆಯಬೆಕಾಯಿತು.ಬೇರೆ ಭಾಷೆಯಲ್ಲಿ ಬರೆದರೆ essence ಕಳೆದು ಹೊಗೊತ್ತೆ.,ಆದ್ರೂ ಅರ್ಥ ಅಗದವರಿಗೆ ಭಾವಾರ್ಥ: ನಿನ್ನ ಲೆಕ್ಕಕ್ಕೆ ೩೦೦ ಮಿಡಿ ಉಪ್ಪಿನಕಾಯಿ ready ಅಗೊತ್ತೆ ತೆಗೊಂಡುಹೋಗಿ ಮಜಾ ಮಾಡು )
"ಮನೆ ಮುಂದಿನ ತೋತಾಪುರಿ ಮರ,ಅದರ ಪಕ್ಕದ "ಮನೋರಂಜನ್" ಮರ(ತಿಳಿಯದವರಿಗೆ : ಇದೊಂದು ಜಾತಿಯ ಕಸಿ ಮಾವು .ಕಾಯಿ ಅತಿ ಹುಳಿಯಾಗಿದ್ದು ಹಣ್ಣು ಬಹಳ ಸಿಹಿ ಯಾಗಿರುತ್ತದೆ),ಮನೆ ಹಿಂದಿನ ನೆಕ್ಕರೆ ಎಲ್ಲಾ ಚೆನ್ನಾಗಿ ಫಲ ಬಿಟ್ಟಿದೆ."
(ಭಾವಾರ್ಥ: ನಾನು ನನ್ನ ತಮ್ಮ ಮನೆಯಲ್ಲಿ ಇಲ್ಲದೆ ಇರುವುದರಿಂದಾಗುವ ಅನೇಕ ಉಪಯೋಗಗಳಲ್ಲಿ ಒಂದು. ನಾನು,ತಮ್ಮ ಮನೆಯಲ್ಲಿದ್ದರೆ ಬರುವ ಗೆಳೆಯರಿಗೆಲ್ಲ ಮನೆಯ ಮಾವಿನ ಮರದ ಮೇಲೆ ಕಣ್ಣು ಎಲ್ಲರಿಗೂ ಮಾವಿನ ಕಾಯಿ ಸಮಾರಾಧನೆ ಆಗಲೇ ಬೇಕು.ಮನೆಯಲ್ಲಿದ್ದರೆ ನಮಗೆ ತುರಿದ ಮಾವಿನ ಕಾಯಿ ಹಾಕಿದ ಚುರುಮುರಿ ಇಲ್ಲದೇ ಸಂಜೆ ಒಂದು ತೊಟ್ಟು "ಚಾಯ" ಗಂಟಲಿನ ಕೆಳಗೆ ಇಳಿಯುವುದಿಲ್ಲ.)
"ಅಜ್ಜನ ಮನೆಯ ಹೊಳೆಬದಿಯ ಪುಟ್ಟ ಮಾವು ...ಮನೆಯ gate ಎದುರಿನ ಜೀರಿಗೆ ಮಾವು...."
"ಮೊನ್ನೆ ಚಪಾತಿಗೆ ಮಾವಿನ ರಸಾಯನ....."

ಹೀಗೆ ಎಲ್ಲಾ ವಿಷಯಗಳಲ್ಲೂ ಮಾವು ಇತ್ತು.ನನಗೆ ಮನೆಯಲ್ಲಿ correct time ಗೆ ಇಲ್ಲದೇ ಇರುವ ದು:ಖ... ಈ ಮಾವಿನ ಋತುವಿನಲ್ಲಿ ನಾನು ಮನೆಯಲ್ಲಿ ಇಲ್ಲ ಇದೇ ದು:ಖ.

ಅಂದ ಹಾಗೆ ನಮ್ಮ ಶಾಲೆಯ ಎದುರುಗಡೆ ಮಾವಿನ ಮರವಿತ್ತು .ನಮಗೆ ಮಾವಿನ ಕಾಯಿ ತಿನ್ನುವ ಹುಚ್ಚು. ಕೊನೆಗೆ ಕಲ್ಲು ಹೊಡಿಯುವ ಹುಡುಗರಿಗೆ ನಾನೇ ಲೀಡರ್ ಅಂತ ಗೊತ್ತಾಗಿ ನನಗೆ ಮಾವಿನ ಮರ ಕಾಯುವ ಶಿಕ್ಷೆ .ದಿನಾ ಬೆಳಗ್ಗೆ ಶಾಲೆ ಶುರುವಾಗುವ ಮೊದಲು ಬಂದು ಮರಕ್ಕೆ ಕಲ್ಲು ಹೊಡಿಯುವ ಹುಡುಗರ ಹೆಸರಿನ ಪಟ್ಟಿ ಒಪ್ಪಿಸಬೇಕೆಂದು ಪ್ರೇಮಾ ಟೀಚರ್ ಆಜ್ನೆ .
ಹೆಸರು ಬರೆಯದಿರುವುದಕ್ಕೆ ದಿನಕ್ಕೆ ಪ್ರತಿದಿನ ಪ್ರತಿಯೊಬ್ಬರಿಂದಲೂ ಒಂದು ಮಾವಿನಕಾಯಿ ಕಪ್ಪ( ಅದರ ಬದಲು ದಿನಕ್ಕೆ ನಾಲ್ಕಾಣೆ collect ಮಾಡಿದ್ರೂ ಸಾಕಿತ್ತು ಮಿತ್ತಲ್ ಗಿಂತ ಶ್ರೀಮಂತ ಆಗಿರುತ್ತಿದ್ದೆ ;))

ಹಾಸ್ಟೆಲ್ ನಲ್ಲಿ ಇದ್ದಾಗ ನಾನು ಮತ್ತು ನನ್ನ batchmates ಎಲ್ಲ ಮಾವಿನ ಹಣ್ಣು ದಿನಾ ತಂದು ತಿನ್ನುತ್ತಿದ್ವಿ.(seasonನಲ್ಲಿ offcourse).ನಾವು ಮಾವಿನ ಹಣ್ಣು ಕೈಯಲ್ಲಿ ಹಿಡಿದು ಕಚ್ಚಿ ತಿನ್ನುತ್ತಿದ್ವಿ (pure indian style..ವಾನರರ ತರಹ) ಆದರೆ ನಮ್ಮ juniors neat ಆಗಿ british civilized styleನಲ್ಲಿ ಹಣ್ಣನ್ನು ಚೂರಿಯಲ್ಲಿ ಕತ್ತರಿಸಿ ತಿನ್ನುತ್ತಿದ್ದರು. ನಾವು ಆ ತರಹ ತಿನ್ನಲು ಪ್ರಯತ್ನಿಸಿ ಅದರಲ್ಲಿ ಕಚ್ಚಿ ತಿನ್ನುವ ಮಜಾ ಇಲ್ಲ ಅಂತ pure indian styleಗೆ ವಾಪಾಸಾದ್ವಿ.

ನಮ್ಮ ಮನೆಯಲ್ಲಿ ಮಾವಿನ ಹಣ್ಣು ರಸಾಯನ ಮಾಡಿದಾಗೆಲ್ಲ 2 ಭಾಗ ಮಾಡುತ್ತಾರೆ. ಒಂದು ಭಾಗ ನನಗೆ ಇನ್ನೊಂದು ಉಳಿದವರಿಗೆಲ್ಲ..
ಮೊನ್ನೆ ಆಮ್ಮ phone ಮಾಡಿದಾಗ ಮಾವಿನ ಋತು ಮುಗಿಯೊಮೊದಲೆ ಬಾ ಮಗು ಅಂದ್ರು. ನಾನು ಊರಿಗೆ ಹೊಗಬೇಕು.ಎನು ಕಾರಣ ಕೊಡೋದು ಅಂತ ಗೊತ್ತಾಗುತ್ತಿಲ್ಲ.
"ಸಾರ್ ಊರಲ್ಲಿ ಮಾವಿನ season ಅದಕ್ಕೆ ಊರಿಗೆ ಹೋಗ್ಬೆಕು" ಅಂತ ಕೊಡೋದಾ?
"ನಾನು ಊರಿಗೆ ಹೋಗಿ ಮಾವಿನ ಹಣ್ಣಿನ ರುಚಿ ನೋಡದಿದ್ರೆ ನಮ್ಮ ಮನೆಯ ಮಾವಿನ ಮರಗಳೆಲ್ಲ ಮುನಿಸಿಕೊಳ್ಳುತ್ತವೆ."ಅಂತ ಕೊಡೋದಾ?

ಅಂದ ಹಾಗೆ

ಶಾಲೆಗೆ ಹೋಗುವಾಗ ದಾರಿ ಬದಿಯ ಮಾವಿನ ಮರಕ್ಕೆ ಕಲ್ಲು ಹೊಡೆದು ಮಾವಿನ ಹಣ್ಣು ತಿನ್ನುವ ಮಜಾ... ಆ ರುಚಿ...ಮಾರ್ಕೆಟಿಂದ ತಂದ ಅಲ್ಫೊನ್ಸೋದಲ್ಲಿ/ಬಾದಾಮಿಯಲ್ಲಿ/ರಸಪೂರಿಯಲ್ಲಿ ಹುಡುಕುತ್ತಿದ್ದೇನೆ.
ಆ ಮಜಾ ..ಆ ರುಚಿ ಯಾಕೋ ಸಿಗುತ್ತಿಲ್ಲ.

Tuesday, April 24, 2007

ಬಂಗಾರದ ಮನುಷ್ಯ ನಿಗೆ ನಮನ

ರಾಜ್ ಕುಮಾರ್ ..ಡಾ.ರಾಜ್ ... ಆ ಹೆಸರಿಗೆ ಇದ್ದ ಚುಂಬಕ ಶಕ್ತಿ ಎಲ್ಲರಿಗೂ ಗೊತ್ತು. ಶ್ರೀಕೃಷ್ಣನಿಂದ ಮಹಿಷಾಸುರನ ತನಕ, ಹಳ್ಳಿ ಗಮಾರ ನಿಂದ BOND ಶೈಲಿಯ ಪಾತ್ರಗಳನ್ನ ಒಂದೇ easeನಲ್ಲಿ ಮಾಡುತ್ತಿದ್ದ ಅದ್ಬುತ ಕಲಾವಿದ. ಹಾಡುಗಳಿಗೆ ಜೀವ ತುಂಬುತ್ತಿದ್ದ ಹಾಡುಗಾರ. ಅಣ್ಣಾವ್ರ ನೆನಪಿನಲ್ಲಿ ಒಂದು ಬ್ಲಾಗ್ ಬರಿಯಬೇಕು ಅಂತ ಬಹಳ ದಿನದಿಂದ ಯೊಚಿಸುತ್ತಿದ್ದೆ. ಇವತ್ತು ಬರೆದರೆ ಉತ್ತಮ ಅನ್ನಿಸಿತು ಅದಕ್ಕೆ ಬರೆಯುತ್ತಿದ್ದೇನೆ. ಅಭಿಮಾನಿ ದೇವರುಗಳು ಸ್ವೀಕರಿಸಬೇಕು.

ಅಣ್ಣಾವ್ರು ಅಂದ್ರೆ ಮಿಂಚಿನಂತೆ ಮನಸಿಗೆ ಹೊಳೆಯುವುದು ...."ಬಂಗಾರದ ಮನುಷ್ಯ". ಟಿ.ಕೆ.ರಾಮರಾಯರ ಇದೇ ಹೆಸರಿನ ಕಾದಂಬರಿಯ ಚಿತ್ರ ರೂಪಾಂತರ. "ರಾ..ರಾಜೀವಪ್ಪ..."ಅಂತ ಬಾಲಕೃಷ್ಣ ತಮ್ಮ unique style ನಲ್ಲಿ ಅವರನ್ನ ಸಂಭೋಧಿಸುವ ರೀತಿಯೇ ಆ ಪಾತ್ರವನ್ನು ನೆನಪಿನಲ್ಲಿ ಇರುವಂತೆ ಮಾಡಿದ್ದು. ಮೊನ್ನೆ ಗೋವಾ ಚಿತ್ರೋತ್ಸವದಲ್ಲಿ ಡಾ.ರಾಜ್ ನೆನಪಿಗೆ ಇದೇ ಚಿತ್ರ ಪ್ರದರ್ಶಿತವಾಯಿತು.ಹೆಚ್ಚಾಗಿ ಅಪ್ಪ-ಅಮ್ಮ ಮಕ್ಕಳು ಹೆಚ್ಚು film ನೋಡಬಾರದು ಅಂತ insist ಮಾಡ್ತಾರೆ.ಆದ್ರೆ ಬಂಗಾರದ ಮನುಷ್ಯ ನೋಡು ಅಂತ ನನ್ನ force ಮಾಡಿ ಕೂರಿಸಿದ್ದು ನನ್ನ ಅಮ್ಮ. ಅಂದ ಹಾಗೆ ಬಂಗಾರದಮನುಷ್ಯ ಒಂದು ಚಿತ್ರ ಮಂದಿರದಲ್ಲಿ 2 ವರ್ಷ, 5 ಚಿತ್ರ ಮಂದಿರದಲ್ಲಿ 1 ವರ್ಷ ಓಡಿದ್ದು ಒಂದು ಸರ್ವಕಾಲಿಕ ದಾಖಲೆ.
"ಯಾರೇ ಕೂಗಾಡಲಿ ..ಊರೇ ಹೋರಾಡಲಿ".ಇದು ಡಾ.ರಾಜ್ ಮೊದಲ ಬಾರಿಗೆ ಹಿನ್ನಲೆ ಗಾಯನ ಮಾಡಿದ ಹಾಡು..ಚಿತ್ರ:"ಸಂಪತ್ತಿಗೆ ಸವಾಲ್" , ಉತ್ತರ ಕರ್ನಾಟಕದ ಕಂಪನಿ ನಾಟಕದ ಚಿತ್ರ ರೂಪಾಂತರ. ಬರೆದವರು ಯಾರು ಆಂತ ನೆನಪಾಗುತ್ತಿಲ್ಲ ಬಹುಷ ಧುತ್ತರಗಿಯವರು ಇರಬೇಕು.ಕೈಯಲ್ಲಿ ಗಂಡುಗೊಡಲಿ ಹಿಡಿದು "ಸಾಹುಕಾರ್ ಸಿದ್ದಪ್ಪ ..ನಿನ್ನ ಸಂಪತ್ತಿಗೆ ನನ್ನ ಸವಾಲ್" dialougueನ ಮರಿಯೋಕೆ ಸಾಧ್ಯ ವೇ?
"ಆಡಿಸಿ ನೋಡು ..ಬೀಳಿಸಿ ನೋಡು .." ಹೌದು ನಾನು ಮಾತಾಡ್ತಿರೋದು "ಕಸ್ತೂರಿ ನಿವಾಸ" . ಈ ಚಿತ್ರದ ಬಗ್ಗೆ ಎನೂ ಬರಿಯೊಲ್ಲ. ಚಿತ್ರ ನೋಡಿ ಚಿತ್ರದ Intensity ತಿಳಿಯಿರಿ.
"ಕುಲದಲ್ಲಿ ಕೀಳ್ಯಾವುದೋ.." ಎಂ.ಪಿ.ಶಂಕರ್ ಮೇಲೆ ಚಿತ್ರಿಕರಿಸಲಾಗಿರುವ ಈ ಹಾಡು "ಸತ್ಯ ಹರಿಶ್ಚಂದ್ರ"ಚಿತ್ರದ್ದು.ಚಿತ್ರ ಬಹಳ ಹಿಟ್ ಆಯಿತು.ಆದ್ರೆ ಚಿತ್ರಕ್ಕಿಂತ ಹಿಟ್ ಆಗಿದ್ದು ಚಿತ್ರದ ಹಾಡು "ಕುಲದಲ್ಲಿ ಕೀಳ್ಯಾವುದೋ.." . ಕರ್ನಾಟಕದ ಯಾವ ಮೂಲೆಗೆ ಹೋದರೂ ಜನ ಆರ್ಕೆಸ್ತ್ರಾದಲ್ಲಿ ನಿಮ್ಮ ಕೋರಿಕೆಯ ಹಾಡು ಅಂದಾಗ ಒಕ್ಕೊರಳಿನಿಂದ ಕೂಗುವುದು ..."ಕುಲದಲ್ಲಿ ಕೀಳ್ಯಾವುದೋ.."
ಭಾರತಿಸುತ ಅವರ ಐತಿಹಾಸಿಕ ಕಾದಂಬರಿಗೆ ಹೆಸರು ತಂದುಕೊಟ್ಟಿದ್ದು ಆ ಕಾದಂಬರಿ ಆಧಾರಿತ ಚಿತ್ರ "ಹುಲಿಯ ಹಾಲಿನ ಮೇವು" .ಅಹಾ...ಯಾರದ್ರು ಮರಿಬಹುದೇ ಆ ಸುಂದರ ಯುಗಳ ಗೀತೆ "ಬೆಳದಿಂಗಳಾಗಿ ಬಾ...."
ನರಸಿಂಹಯ್ಯನವರ ಪತ್ತೆದಾರಿ ಕಾದಂಬರಿಗಳ famous ಪಾತ್ರ "CID ಏಜೆಂಟ್ 999" ಗೆ ಜೀವ ತಂದಿದ್ದು ರಾಜ್.."ಜೇಡರ ಬಲೆ"ಯಿಂದ ಶುರುವಾಯಿತು BOND ಯುಗ. ಸತತ ಆರು ವರ್ಷದಲ್ಲಿ ಆರು ಚಿತ್ರಗಳು .ಎಲ್ಲಾ ಚಿತ್ರಗಳು ಕಪ್ಪು ಬಿಳುಪು ಚಿತ್ರ ಗಳಾಗಿದ್ದರೂ technically ಮತ್ತು ಕಥೆ ಯ ವಿಷಯದಲ್ಲಿ ಚೆನ್ನಾಗಿದೆ.ನಂತರ ಬಹಳ ವರ್ಷಗಳ ನಂತರ "CID ಏಜೆಂಟ್ 999" ಅಥವಾ "the most intelligent intelligence officer"ಪ್ರಕಾಶ್ ಮರಳಿ ಬಂದಿದ್ದು "ಆಪರೇಶನ್ ಡೈಮಂಡ್ ರಾಕೆಟ್ " ಚಿತ್ರ ದೊಂದಿಗೆ, ಸರಳವಾಗಿ ಹೇಳುವುದಾದರೆ ಇದು Ian fleming's "DR.NO "ದ ರೀಮೇಕ್. ಅದು "CID ಏಜೆಂಟ್ 999" ಸರಣಿಯ ಕೊನೆ ಚಿತ್ರ.
"CID ಏಜೆಂಟ್ 999" ಸರಣಿಯ ಎರಡನೇ ಚಿತ್ರ "ಗೋವಾದಲ್ಲಿ ಏಜೆಂಟ್ 999" ದ ಮೂಲಕ ಒಬ್ಬ ಹೊಸ ನಟಿ ಚಿತ್ರರಂಗಕ್ಕೆ ಕಾಲಿಟ್ಟಳು. as 12 year old contact for "CID ಏಜೆಂಟ್ 999" .ಆಕೆ ಈಗ ಬಾಲಿವುಡ್ಡಿನ ಚಿರಯುವತಿ "ರೇಖಾ "
"ಮಾನವ ಮೂಳೆ ಮಾಂಸದ ತಡಿಕೆ " ..."ಭಕ್ತ ಕುಂಬಾರ" ಚಿತ್ರದ ಗೀತೆ . ಇದರ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟದ್ದು "roop ki raani " ಶ್ರೀದೇವಿ.ರಾಜ್ ಕಾಲ ಕೆಳಗೆ ಸಿಕ್ಕಿ ಸಾಯುವ ಮಗುವಿನ ಪಾತ್ರ ಮಾಡಿದ್ದು ಹವಾ ಹವಾಯಿ ಬೆಡಗಿ.
ರಾಜ್ ಅಬಿನಯಿಸಿದ ಮೊದಲ ಚಿತ್ರ "ಬೇಡರ ಕಣ್ಣಪ್ಪ " ಕ್ಕೆ ರಾಷ್ಟ್ರ ಪ್ರಶಸ್ತಿ ಬಂತು.ಈ ಚಿತ್ರದ ನಿರ್ಮಾಪಕರಿಗೆ ಈ ಉದ್ದ ಮೂಗಿನ ಹೀರೋ ಯಾಕೊ ಪಾತ್ರಕ್ಕೆ ಸರಿಯಿಲ್ಲ ಅನ್ನಿಸಿತ್ತಂತೆ.ಆದರೆ ಮುಂದೆ ನಡೆದದ್ದು ಇತಿಹಾಸ.
1977 ರಲ್ಲಿ ಚಿಕ್ಕಮಗಳೂರಿನ ಮರು ಚುನಾವಣೆಯಲ್ಲಿ ಜನತಾ ಪಕ್ಷದ ಅಭ್ಯರ್ಥಿಯಾಗಿ ನಿಲ್ಲಿ ಅಂದಾಗ ನಾನು ಕರ್ನಾಟಕಕ್ಕೆ ಸೇರಿದವನು , ಯಾವುದೇ ಪಕ್ಷಕ್ಕೆ ಅಲ್ಲ ಎಂದು ನಯವಾಗಿ ನಿರಾಕರಿಸಿದರಂತೆ.ಎಲ್ಲಾದ್ರೂ ರಾಜ್ ಚುನಾವಣೆಯಲ್ಲಿ ನಿಂತಿದ್ದರೆ ..mostly ಮುಖ್ಯಮಂತ್ರಿ ಆಗುತ್ತಿದ್ದರೋ ಎನೋ.
ರಾಜಣ್ಣ ನಟನೆ ಮತ್ತು ಗಾಯನಕ್ಕೆ ರಾಷ್ಟ್ರ ಪ್ರಶಸ್ತಿ ಪಡೆದಿರುವ ಎಕೈಕ ಕಲಾವಿದ
ಪಟ್ಟಿ ಮಾಡುತ್ತಾ ಹೋದರೆ ಹಲವಾರು ಚಿತ್ರರತ್ನಗಳು ನನ್ನ ಮೇಲಿನ ಪಟ್ಟಿಯಿಂದ ಬಿಟ್ಟು ಹೋಗಿವೆ..ಅವುಗಳಲ್ಲಿ ಮುಖ್ಯವಾದುವು :ಶ್ರೀ ಕೃಷ್ಣದೇವರಾಯ, ರಣಧೀರ ಕಂಠೀರವ, ಇಮ್ಮಡಿ ಪುಲಿಕೇಶಿ,ಗಂಧದ ಗುಡಿ,ಮಯೂರ..ಇತ್ಯಾದಿ
ಯಾರು ಎನೇ ಹೇಳಲಿ ..ಕನ್ನಡಿಗರ ಮನದಲ್ಲಿ ರಾಜ್ ಸ್ಥಾನ ಬೇರೆಯವರಿಗೆ ತುಂಬಲು ಸಾಧ್ಯವಿಲ್ಲ.ತಮ್ಮ ಚಿತ್ರಗಳ ಮೂಲಕ ರಾಜ್ ಚಿರಾಯು

Tuesday, March 27, 2007

ಅನಿಸುತಿದೆ ಯಾಕೊ ಇ೦ದು..

ಅನಿಸುತಿದೆ ಯಾಕೊ ಇ೦ದು..
ಕ್ರಿಕೆಟ್ ನೊಡೋದು waste ಎ೦ದು..
ಅಹಾ ಎ೦ತ ಘೋರ ಯಾತನೆ..
waste fellows ಹೋಗಿ ಬ೦ದರು ಹಾಗೆ ಸುಮ್ಮನೆ....

ಭಾರತ ತಂಡ ಎಲ್ಲಾ ಭಾರತೀಯರ ಆರೋಗ್ಯದ ದೃಷ್ಟಿಯಿಂದ (ರಾತ್ರಿ ನಿದ್ದೆಗೆಟ್ಟರೆ ಆರೋಗ್ಯ ಕೆಡುತ್ತೆ...!!!) first roundನಲ್ಲೇ ಹೊರಗೆ ಬಂದಿದೆ...
ಅದಕ್ಕಾಗಿ ಅವರಿಗೆ ಧನ್ಯವಾದಗಳು...

ಸಮರ್ಥ ತಂಡ ಕ್ರಿಕೆಟ್ ಜಗತ್ತನ್ನಾಳಲಿ ಎಂದು ಹಾರೈಸುತ್ತೇನೆ.

Wednesday, March 21, 2007

ಕತೆಯಾದ ಕತೆಗಾರ...


"ಇನ್ನ ಐದು ಕಥಿ ಬರಿಯೋದು ಬಾಕಿ ಅದ.ಆಮೇಲೆ ಆರನೇ ಕಥಿ ಬರಿಯಾಂಗಿಲ್ಲ.ತುಂಬಾ ಟಯರ್ಡ್ ಆಗೇದ.ಲಾಂಗ್ ಲೀವ್ ಹಾಕೋದ್ ಅದ ಆಂತ ಪ್ರಕಾಶಕರಿಗೆ ಹೇಳಿಬಿಡು" ಅಂತ ತಮ್ಮ ಪತ್ನಿ ಕಾಂತಾ ಗೆ ಹೇಳಿದ ರಾಘವೇಂದ್ರ ಖಾಸನೀಸರು ನಂತರ ತಮ್ಮ ಐದು ಕಥೆ ಬರಿಯದೇ ಹೊರಟು ಹೋದರು.
ಕನ್ನಡದ ವಿಶಿಷ್ಟ ಕತೆಗಾರ ರಾಘವೇಂದ್ರ ಖಾಸನೀಸರು ನಿನ್ನೆ (20 mar 2007 )ಬೆಳಗ್ಗೆ ನಮ್ಮನ್ನೆಲ್ಲ ಅಗಲಿದರು.ಖಾಸನೀಸರು ತಮ್ಮ 45 ವರ್ಷದ ಸಾಹಿತ್ಯ ಕೃಷಿಯಲ್ಲಿ ಬರೆದಿದ್ದು ಕೇವಲ 25 ಕತೆಗಳು.ಆ 25 ಕತೆಗಳು ಏಂದೂ ಮರೆಯಾಗಲದಂಥವು.1933 ರಲ್ಲಿ ಇಂಡಿಯಲ್ಲಿ ಜನಿಸಿದ ಅವರು ತಮ್ಮ ವಿಶಿಷ್ಟ ಕತೆಗಳಿಗಾಗಿ ಹೆಸರುವಾಸಿ.ಈ ಗುಬ್ಬಿ ದೇಹದ ಕತೆಗಾರನನ್ನು ಹಿಂಡಿದ್ದು ಪಾರ್ಕಿನ್ ಸನ್ ಖಾಯಿಲೆ.

"ಖಾಸನೀಸರ ಕಥೆಗಳು", "ಬೇಡಿಕೊಂಡವರು", "ಖಾಸನೀಸರ ಸಮಗ್ರ ಕಥೆಗಳು" ಅವರ ಪ್ರಕಟಿತ ಕೃತಿಗಳು.
"ಅಪಘಾತ", "ಅಲ್ಲಾವುದ್ದೀನನ ದೀಪ", ಮೋನಾಲಿಸಾ, "ಹೀಗೂ ಇರಬಹುದು ", "ತಬ್ಬಲಿಗಳು" ಇವು ಖಾಸನೀಸರ ಕೆಲವು ಉತ್ತಮ ಕತೆಗಳು.
ನಿನ್ನೆ ಸಂಜೆ ಅವರ ನಿಧನದ ಸುದ್ದಿ ಕೇಳಿ ಮನಸಿನಲ್ಲಿ ಎನೋ ಬೇಸರ,ವಿಷಾದ,ನೋವು.ನಿನ್ನೆ ರಾತ್ರಿ "ಖಾಸನೀಸರ ಸಮಗ್ರ ಕಥೆಗಳು" ಪುಸ್ತಕವನ್ನು ರಾತ್ರಿ ಮತ್ತೊಮ್ಮೆ ಓದಿ ಅವರಿ ಶ್ರದ್ಧಾಂಜಲಿ ಅರ್ಪಿಸಿದೆ,ಓದುವಾಗ ಯಾಕೊ ಕಣ್ಣು ಮಂಜಾಗುತಿತ್ತು.

ನೀವು ಇನ್ನೂ ಖಾಸನೀಸರ ಕತೆಗಳು ಓದದಿದ್ದರೆ ಒಮ್ಮೆ ಓದಿ..ಅವರ ಕತೆಗಳು ಇಷ್ಟವಾಗದಿದ್ದರೆ ಕೇಳಿ.
ಇಂತಾ ಅಪರೂಪದ ಕತೆಗಾರನ ಬತ್ತಳಿಕೆಯಲ್ಲಿ ಬಾಕಿಯಾದ ಐದು ಕತೆಗಳು ಓದುವ ಭಾಗ್ಯ ಸಿಗಲಿಲ್ಲವಲ್ಲ ಇದೇ ಬೇಸರ.
ಕನ್ನಡದ ಕತೆಗಾರ ಪಟ್ಟಿಯಲ್ಲಿ ರಾಘವೇಂದ್ರ ಖಾಸನೀಸರ ಹೆಸರು ಅಮರ.
ಅವರ ಆತ್ಮಕ್ಕೆ ಶಾಂತಿ ಸಿಗಲಿ.

Thursday, February 22, 2007

ಮುಂಗಾರು ಮಳೆ hangover

sud -sudden ಆಗಿ ಎಲ್ಲಾರು ಮುಂಗಾರು ಮಳೆ hangover ಅಲ್ಲಿ ಇದ್ದಾರೆ ಅನ್ನಿಸ್ತಿದೆ.
ಎಲ್ಲಿ ನೋಡಿದ್ರು ಮುಂಗಾರು ಮಳೆ ...ಮುಂಗಾರು ಮಳೆ ...ಮುಂಗಾರು ಮಳೆ .
ನಿನ್ನೆ ದುಬೈನಲ್ಲಿರೊ ದೋಸ್ತ್ ಗೆ phone ಮಾಡಿದ್ರೆ first question "ಮುಂಗಾರು ಮಳೆ ನೋಡಿದ್ಯಾ? ಹೆಂಗಿದೆ ? ಎಲ್ಲಾರು ಚೆನ್ನಾಗಿದೆ ಅನ್ತಿದಾರೆ"
ಕಳೆದ ವಾರ ಚೆನ್ನೈ ಗೆ ಯಾವುದೋ function ಗೆ ಹೋಗಿದ್ದೆ ..ಹೋಗ್ತಾ ರೈಲಲ್ಲಿ ನಮ್ಮ ನಡುವೆ ನಡೆದ conversation ತುಣುಕು
"ಮುಂಗಾರು ಮಳೆ ನೋಡಿದ್ಯಾ? ಸಕ್ಕತ್ತಾಗಿದೆ ಅಲ್ವ ಮಗಾ"
"ಲೋ.$@#$$#@###..ನಾನು ಅದನ್ನ 5 ಸಲ ನೋಡಾಯಿತು"
"ಯಾಕೊ ನನ್ನದೇ life ಸ್ಟೋರಿ ಅನ್ನಿಸ್ತಾ ಇದೆ ಕಣೋ "
"ಸ್ವಲ್ಪ ಮುಚ್ಕೊಂಡು ಕೂರ್ತಿಯ..ಎಲ್ಲಿ chance ಸಿಗೊತ್ತೋ ಅಲ್ಲಿ scope ಹೊಡಿಯೊಕೆ try ಮಾಡ್ತೀಯಲ್ಲೊ ಬೇ..."

ಬೆಂಗಳೂರಿನಲ್ಲಿ ಆಟೋ ದಲ್ಲಿ ಹೋಗ್ತಿರುವಾಗ ತೆಲುಗು ಹಾಡು ಹಾಕಿದ.ಗುರುವೇ ಕನ್ನಡ ಹಾಡು ಕೇಳಿಸು ಅಂದೆ..ಸಾರ್ ಹಾಕ್ತೀನಿ ಅಂತ ಹಾಕಿದ ಕೂಡಲೇ ಸ್ಪೀಕರ್ ಕೂಗೋಕೆ start ಮಾಡಿತು..."ಕುಣಿದು ಕುಣಿದು ಬಾರೇ..ಒಲಿದು ಒಲಿದು ಬಾರೇ.."
ತಮ್ಮಂಗೆ phone ಮಾಡಿದ್ರೆ ಮೊದಲೆಲ್ಲಾ ಹಿಂದಿ ಹಳೇ ಹಾಡು caller tune ಆಗಿ ಕೆಳಿಸ್ತಿತ್ತು..ಅದ್ರೆ ಮೊನ್ನೆ " ಅನಿಸುತಿದೆ ಯಾಕೋ ಇಂದು ...ನೀನೇನೇ.."
ನಿನ್ನೆ T.V. ಹಾಕಿದ ಕೂಡಲೇ U2 ನಲ್ಲಿ ಹೇಳುತಿದ್ದ "thanks for kaaling ,ನಿಮಗಾಗಿ ಮುಂಗಾರು ಮಳೆ ಚಿತ್ರದ ಒಂದು ಸುಂದರ ಆಡು ..ನೋಡಿ Yenjoi ಮಾಡಿ"
..."ಕುಣಿದು ಕುಣಿದು ಬಾರೇ..ಒಲಿದು ಒಲಿದು ಬಾರೇ.."

ಮೈಸೂರಲ್ಲಿ ಒಪೇರಾ ಅನ್ನೋ ಚಿತ್ರಮಂದಿರ ಇದೆ ಅಂತಾ ಯಾರೀಗೂ ಗೊತ್ತಿರಲಿಲ್ಲ. ನಾನು ಕಾಲೇಜಿಗೆ ಹೊಗ್ತಿದ್ದಾಗ ಒಪೇರಾ ದಲ್ಲಿ ಯಾವಾಗ್ಲೂ ಡಬ್ಬಾ .third rate films ಬರೋದು ಅಂತ ಸುಮಾರು ಸೀನಿಯರ್ಸ್ ಹೇಳ್ಥಿದ್ರು...ನಾನು ಮೈಸೂರಿನ all most ಎಲ್ಲಾ ಚಿತ್ರಮಂದಿರಗಳಿಗೆ ಕಾಲೇಜು ದಿನಗಳಲ್ಲಿ educational ಭೇಟಿ ಕೊಟ್ಟಿದ್ರೂ ಒಪೇರಾ ಗೇ ಹೊಗಿಲ್ಲಾ .
ಆದ್ರೆ ಈಗ ಒಪೇರಾ ದಲ್ಲಿ ಬಾಲ್ಕನಿ ಟಿಕೆಟ್ ಬ್ಲಾಕಲ್ಲಿ 150 ಕ್ಕೆ ಹೋಗೊತ್ತೆ ಯಾಕೆ ಗೊತ್ತಾ ..ಒಪೇರಾ ದಲ್ಲಿ ನಡಿತಾ ಇರೋದು ಮುಂಗಾರು ಮಳೆ .

ನನಗೆ ಮುಂಗಾರು ಮಳೆ ಚೆನ್ನಾಗಿದೆ ಅನ್ನಿಸಿತು. ಈ crazeಗೆ ಕಾರಣ ಎನಿರಬಹುದು ಅಂತಾ ಆಲೋಚನೆ ಮಾಡ್ತಾ ಇದ್ದೆ.
ಜನ ದರ್ಶನ್ ಮಚ್ಚ್ಹುಫಿಲಮ್,ಉಪ್ಪಿ ಯ ಅದೇ ಮ್ಯಾನರಿಸಂ ನ ಫಿಲಮ್ ಗಳು,ಸುದೀಪ್ ನ ತಿರುಪತಿ ತರಹದ ಮಚ್ಚು ಫಿಲಮ್ ,ಹೊಸ ಹುಡುಗರ ಮಚ್ಚು ಫಿಲಮ್ ಗಳು, ಡಾ. ವಿಷ್ಣುರವರ ಮೀಸೆ ಬ್ರಾಂಡ್ ಸಿನಿಮಾಗಳು, ಕಲಾ ಸಾಮ್ರಾಟ್ ನಾರಾಯಣನ ತಾಯಿ ಸೆಂಟಿಮೆಟ್ ಚಿತ್ರಗಳನ್ನು ನೋಡೀ..ನೋಡೀ...ಮೆಂಟಲ್ ಆಗಿದ್ರು.ಎಲ್ಲಾರು "ಬಾರೇ ಬಾರೇ ನನ್ನ ಬಜಾರಿ", "ಇಳೀಬ್ಯಾಡ ಮಗ ಇಳೀಬ್ಯಾಡ ರೌಡಿಸಂಗೆ","ಕೇಳ್ಕೋಂಡು ಬಾರೋ ಅಂದ್ರೆ ಮಾಡ್ಕೊಂಡು ಬರ್ತಿಯಾ", "ರಕ್ಷಿತಾ,ರಕ್ಷಿತಾ
..ನನ್ನ ಕಿಸ್ಸು ಸಿಕ್ಕಿತಾ" ತರಹಾ ಕೆಟ್ಟ ಕೆಟ್ಟ ಹಾಡು ಕೇಳಿ ಸುಸ್ತಾಗಿದ್ರು.
so ಮುಂಗಾರು ಮಳೆ ಸ್ವಲ್ಪ different ಅನ್ನಿಸಿತು. ಹಾಡುಗಳು ಹಿತ ಅನ್ನಿಸಿತು.ಜಯಂತ ಕಾಯ್ಕಿಣಿ ಬರೆದ ಹಾಡುಗಳ lyrics ಮನ ಮುಟ್ಟಿದವು.

ಎನೇ ಹೇಳಿ ಇಂಥಾ ಚಿತ್ರ ಕೊಟ್ಟ ನಿರ್ದೇಶಕ ಯೋಗರಾಜ ಭಟ್ ಗೆ, ಕಾಮಿಡಿ ಟೈಮ್ ಗಣೇಶನಿಗೆ thanks a lot .

Wednesday, February 21, 2007

ಆವರಣ

ಮೊನ್ನೆ ಬಹಳ ದಿನಗಳ (ಸುಮಾರು ಒಂದೂವರೆ ವರ್ಷ) ನಂತರ ಒಂದೇ ಗುಕ್ಕಿನಲ್ಲಿ ಕೂತು ಪುಸ್ತಕ ಓದಿ ಮುಗಿಸಿದೆ.
ನನ್ನ cousin ಮನೆಗೆ ಹೋಗಿದ್ದಾಗ ಅಲ್ಲಿ "ಆವರಣ"(ಎಸ್.ಎಲ್.ಭೈರಪ್ಪನವರ ಹೊಸ ಕಾದಂಬರಿ)ಇತ್ತು.ಸುಮ್ನೆ ಒಂದೆರಡು ಪುಟ ಒದೋಣ,ಮರುದಿನ ಸಪ್ನಾದಲ್ಲಿ ತಗೋಬಹುದು ಅಂತ ಪುಸ್ತಕ ಹಿಡಿದು ಕೂತೆ.ರಾತ್ರಿ ೧೨ ಘಂಟೆ ಆಗಿತ್ತು.
ಒಮ್ಮೆ ಭೈರಪ್ಪನವರ ಪುಸ್ತಕ ಹಿಡಿದರೆ ಮುಗಿಸದೆ ಕೆಳಗಿಡಲು ಸಾಧ್ಯವಿಲ್ಲ ಅನ್ನೊ ಭೈರಪ್ಪನವರ ಬರೆಯುವ ತಾಕತ್ತು ಗೊತ್ತಿತ್ತು ಆದರೂ ನಿದ್ದೆಯ ಮೇಲೆ ಸಿಟ್ಟಿಗೆ ಬಿದ್ದಂತೆ ಪುಸ್ತಕ ಹಿಡಿದುಕೂತೆ.
ಪುಸ್ತಕದ ಮುಗಿಸಿ ಕೆಳಗಿಟ್ಟಾಗ ಬೆಳಗಿನ 4 ಕ್ಕೆ ಇನ್ನು ೧೦ ನಿಮಿಷವಿತ್ತು.
ಒಂದೆ ಗುಕ್ಕಿನಲ್ಲಿ ಓದಿದ್ದು ಸಾರ್ಥಕ ಅನ್ನಿಸಿತು.
ಕಾದಂಬರಿಯ ಕಥಾವಸ್ತು simple.ಆದರೆ ಅದರ ನಿರೂಪಣೆ classic ಭೈರಪ್ಪನವರ ಶೈಲಿಯಲ್ಲಿ.
ನಿಮಗೆ ಕಾದಂಬರಿ ಒದುವಾಗ ಭೈರಪ್ಪ ಹಿಂದು ಬಲಪಂಥೀಯ ಮೂಲಭೂತವಾದಿ ತರಹ ಅನ್ನಿಸಬಹುದು.(ಅದು ನಿಮ್ಮ ಯೋಚನೆಗೆ,ನಿಮ್ಮ ವಿವೇಚನೆಗೆ ಬಿಟ್ಟ ವಿಷಯ) ಯಾಕೆಂದರೆ ಕಥೆಯ ಮೂಲ ಹಂದರವೇ ಭಾರತದಲ್ಲಿ ನಡೆಯತ್ತಿರುವ ಹಿಂದು -ಮುಸ್ಲಿಂ ವೈಮಸಸ್ಯ,ಮುಸ್ಲಿಂ ದೊರೆಗಳ ದಬ್ಬಾಳಿಕೆ.

ಗೃಹಭಂಗ,ಪರ್ವ,ನಿರಾಕರಣಗಳಿಗೆ ಹೋಲಿಸಿದರೆ ಕಥೆ ಸ್ವಲ್ಪ ಸರಳ ,ಕಥಾ ವಿಸ್ತಾರ ಅಷ್ಟು ಆಳವಿಲ್ಲ ಅನ್ನಿಸಬಹುದು . ಎನೇ ಆದರೂ ನನಗನ್ನಿಸಿದಂತೆ "ಅವರಣ" ಒಮ್ಮೆ ಕೂತು ಓದಬಹುದು.
ತುಂಬಾ ದಿನಗಳ ನಂತರ ನನ್ನನ್ನು ಓದಲು ಕೂರಿಸಿದ ಎಸ್.ಎಲ್.ಭೈರಪ್ಪನವರಿಗೆ ಧನ್ಯವಾದಗಳು .

Tuesday, January 02, 2007

ಕಲ್ಲರಳಿ ಹೂವಾಗಿ..ಹೂವರಳಿ ಹೆಣ್ಣಾಗಿ ...

"ಕಲ್ಲರಳಿ ಹೂವಾಗಿ "ಬಿ.ಎಲ್.ವೇಣು ಅವರ ಐತಿಹಾಸಿಕ ಕಾದಂಬರಿ.ತರಂಗದಲ್ಲಿ ಧಾರಾವಾಹಿಯಾಗಿ ಬಂದು ನಂಬರ್ ಒನ್ ಪಟ್ಟದಲ್ಲಿತ್ತು.
ನಾಗಾಭರಣ "ಕಲ್ಲರಳಿ ಹೂವಾಗಿ " ಚಿತ್ರ ಮಾಡುವುದಾಗಿ ಹೇಳಿದಾಗ ನಾನು ಎಲ್ಲಿ ಕಥೆ ಮಠ ಹತ್ತಿಸುತ್ತಾರೋ ಅಂತ ಭಯಪಟ್ಟಿದ್ದೆ. ಅದರೆ ಚಿತ್ರ ನೋಡಿದ ಮೇಲೆ ಮಠ ಹತ್ತಲಿಲ್ಲ ಎನ್ನುವ ಸಮಾಧಾನ ಮನಸಿಗೆ.ನಾಗಾಭರಣ ಬಹಳ ದಿನಗಳಾದ ಮೇಲೆ ಒಂದು ಒಳ್ಳೆಯ ಚಿತ್ರ ಕೊಟ್ಟಿದ್ದಾರೆ.
ಜಯದೇವ (ವಿಜಯ್ ರಾಘವೇಂದ್ರ) ಚಿತ್ರದುರ್ಗದ ಮದಕರಿ ನಾಯಕನ(ರೆಬೆಲ್ ಸ್ಟಾರ್ ಅಂಬಿ) ಓಲೆಗಾರ.ಸದಾ ಹಾಡಿನ ಗುಂಗಿನಲ್ಲಿರುವವ. ಒಂದು ದಿನ ಹುಣ್ಣಿಮೆಯ ರಾತ್ರಿ ದುರ್ಗದ ಹೊರಭಾಗದಲ್ಲಿ ಗಾಯಗೊಂಡು ಪ್ರಜ್ನೆ ಕಳೆದುಕೊಂಡಿರುವ ಹೈದರಾಲಿಯ ಸೇನಾಪತಿಯ ಮಗಳು ನೂರ್ ಜಹಾನ್ (ಉಮಾ ಮಹೇಶ್ವರಿ) ಅನ್ನು ದುರ್ಗಕ್ಕೆ ಹೊತ್ತು ತರುತ್ತಾನೆ.ಅವನ ತಂದೆ ವೈದ್ಯ ಬಸಯ್ಯ(ಅನಂತ್ ನಾಗ್)ಆ ಶತ್ರುಪಡೆಯ ಹುಡುಗಿಯನ್ನು ಗುಟ್ಟಾಗಿ ಉಪಚರಿಸುತ್ತಾನೆ. ಅವಳನ್ನು ಅವನ ಸಂಬಂಧಿಯ ಮಗಳು,ಅನಾಥೆ ಎಂದು ದುರ್ಗಕ್ಕೆ ಪರಿಚಯಿಸುತ್ತಾನೆ.
ಅವಳಿಗೆ ಜಯದೇವ ರತ್ನ ಎಂದು ಮರುನಾಮಕರಣ ಮಾಡುತ್ತಾನೆ. ನೂರ್ ಅಲಿಯಾಸ್ ರತ್ನ ತನ್ನ ತಂದೆ ತಾಯಿಯ ಮರಣ ನೋಡಿದ ಅಘಾತದಿಂದ ಮಾತು ಕಳೆದುಕೊಂದಿರುತ್ತಾಳೆ.
ಮುಂದೆ ಅವಳ ಮತ್ತು ಜಯದೇವನ ನಡುವೆ ನಡೆವ ನವಿರು ಪ್ರೇಮವೇ ಕಥೆ.ನಾಯಕರ ಮನೆಗೆ ಸೀಮಿತವಾಗಿರುವ ರಾಜ ಸಂಪಿಗೆ ಗಾಗಿ ರತ್ನಳ ಆಸೆ. ಅದಕ್ಕೆ ಜಯ ಜೀವ ಪಣಕ್ಕಿಟ್ಟು ಪಂಜರದ ಹಕ್ಕಿ ಗೆದ್ದು ರಾಜ ಸಂಪಿಗೆಯ ನೀಡುವಂತೆ ನಾಯಕರಲ್ಲಿ ಕೋರಿಕೆ ಮಾಡುತ್ತಾನೆ .ನಾಯಕರ ತಥಾಸ್ತು. ನಂತರ ನಾಯಕರಿಂದ ಪ್ರೇಮಿಗಳ ಪ್ರೇಮಕ್ಕೆ ಒಪ್ಪಿಗೆ ಹೀಗೆ ಕಥೆ ಸುಖಾಂತ್ಯದ ಕಡೆ ಸಾಗಿತೆನ್ನುವಾಗ ಮೊಹರಂ ದಿನ ಹೈದರಾಲಿಯ ಸೈನ್ಯದ ಆಕ್ರಮಣ.ಆ ಆಕ್ರಮಣಕ್ಕೆ ನೂರ್ ಜಹಾನ್ ಳ ಅಣ್ಣಂದಿರ ಸಾರಥ್ಯ.ಆ ಯುದ್ಧದ ದಿನ ಏನಾಯಿತು ಅನ್ನುವುದಕ್ಕೆ ಸಿನಿಮಾ ನೋಡುವುದು ಉತ್ತಮ ,ಕಾದಂಬರಿ ಓದುವುದು ಸರ್ವೊತ್ತಮ.(ಸ್ಪಷ್ಟನೆ : ಬಿ.ಎಲ್.ವೇಣು ,ನಾಗಾಭರಣ ,ಮಧು ಬಂಗಾರಪ್ಪ ಯಾರು ನನಗೆ ಚಿತ್ರದ/ಕಾದಂಬರಿಯ ಪ್ರಚಾರಕ್ಕೆ ಯಾವುದೇ ರೀತಿಯ ಗುತ್ತಿಗೆ ನೀಡಿಲ್ಲ.ನಾನು ಆಂತಹ ಆಮಿಷಗಳಿಗೆ ಬಗ್ಗುವವನು ಅಲ್ಲ )

ವಿಜಯ್ ರಾಘವೇಂದ್ರ ಜಯದೇವನ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ಉಮಾ ನೂರ್ ಪಾತ್ರಕ್ಕೆ ಸೂಕ್ತ ಆಯ್ಕೆ.ಮೊರದಗಲ ಕಣ್ಣಿನ ಉಮಾ ತಮ್ಮ ಕಣ್ಣುಗಳಲ್ಲೆ ಮಾತನಾಡುತ್ತಾರೆ.ಅನಂತ್ ನಾಗ್ ,ಆರವಿಂದ್ (ಪ್ರಧಾನಿ ಪರಶುರಾಮಪ್ಪ) ,ಭಾರತಿ (ನಾಯಕನ ತಾಯಿ ನೀಲವ್ವ),ದೇವರಾಜ್ (ಹೈದರಾಲಿ) ತಮ್ಮ ತಮ್ಮ ಪಾತ್ರವನ್ನು ಚೆನ್ನಾಗಿ ನಿರ್ವಹಿಸಿದ್ದಾರೆ. ರೆಬೆಲ್ ಸ್ಟಾರ್ ಯಾವತ್ತಿದ್ದರೂ ರೆಬೆಲ್ ಸ್ಟಾರೇ, ಮದಕರಿ ನಾಯಕನೇ ಆಗಲಿ,ಕನ್ವರ್ ಲಾಲ್ ಆಗಲಿ.ಅಂಬಿ ತಮ್ಮ ರೆಬೆಲ್ styleನಲ್ಲಿ ಮದಕರಿ ನಾಯಕ ನ ಪಾತ್ರ ನಿರ್ವಹಿಸಿದ್ದು ಚಿತ್ರದ highlight(ಎಲ್ಲಾ dialogueಗಳು usual ಅಂಬಿ styleನಲ್ಲಿದ್ದವು) .ಪಾಪ ಸುಮಲತಾಗೆ ಎರಡೇ ಎರಡು dialogue .

ಬರೀ ಸರಳ ಸೀರೆ ಬಳಸಿ ನಾಯಕಿಯನ್ನು ಇಷ್ಟು ಸುಂದರವಾಗಿ ತೋರಿಸಬಹುದು ಅದಕ್ಕೆ costly costume ಬೇಡ ಅನ್ನುವುದಕ್ಕೆ ಚಿತ್ರದಲ್ಲಿ ಉಮಾ ವಸ್ತ್ರವಿನ್ಯಾಸವೇ ಸಾಕ್ಷಿ.ಕುಮಾರರಾಮದಲ್ಲಿ ಇದ್ದಂತೆ ಇಲ್ಲಿ ವಸ್ತ್ರ ವಿನ್ಯಾಸದಲ್ಲಿ ಡಾಳು ಢಾಳಾದ ಆಡಂಬರವಿಲ್ಲ ಎಲ್ಲ ಸರಳ ಸುಂದರ.
ಕುಮಾರ ರಾಮದಲ್ಲಿ ರಾಜಸ್ತಾನದಲ್ಲಿ ಚಿತ್ರಿಕರಿಸಿದ ಅದ್ಢೂರಿಯಾಗಿ ಚಿತ್ರಿಸಿದ ಯುದ್ಧದ ದೃಶ್ಯಗಳು ಬೋರ್ ಹೊಡೆಸಿದ್ದವು .ಆದರೆ ರಾಮನಗರದ ಹಿನ್ನಲೆಯಲ್ಲಿ ಯುದ್ಧದ ದೃಶ್ಯವನ್ನು ನಾಗಾಭರಣ ಸರಳವಾಗಿ effective ಆಗಿ ತೋರಿಸಿದ್ದಾರೆ.
ಚಿತ್ರದ ನಿಜವಾದ ಸ್ಟಾರ್ ಎಚ್.ಸಿ.ವೇಣುರವರ ಕ್ಯಾಮರ ಕಣ್ಣು. ನಾಗಾಭರಣರ imagination ಅನ್ನು ಸಕತ್ತಾಗಿ ವೇಣುರವರ ಕ್ಯಾಮರ ಸೆರೆ ಹಿಡಿದಿದೆ.
ಹಾಡುಗಳ ವಿಷಯಕ್ಕೆ ಬಂದರೆ ಜೈ ಹಂಸಲೇಖ. ಎಲ್ಲಾ ಹಾಡುಗಳ ಸಾಹಿತ್ಯ -ಸಂಗೀತ ಬಹಳ ಚೆನ್ನಾಗಿದೆ.ಹಾಡುಗಳು ತುಂಬಾ freequent ಆಗಿರುವುದರಿಂದ musical ಸಿನಿಮಾ ಅನ್ನಿಸಿಕೊಳ್ಳಬಹುದು. "ಕಲ್ಲರಳಿ ಹೂವಾಗಿ..ಹೂವರಳಿ ಹೆಣ್ಣಾಗಿ "ಗೀತೆಯನ್ನು ನೀವು ಖಂಡಿತಾ ಗುನುಗುತ್ತಾ ಚಿತ್ರಮಂದಿರದಿಂದ ಹೊರ ಬರುತ್ತಿರಾ. "ಸಂಪಿಗೆ ಸಂಪಿಗೆ","ಬೆಳ್ಳಿ ದೀಪಾ.." ಕಿವಿಗೆ ಇಂಪಾಗಿದೆ."ಖಾನಾ ತಾಕತ್ ಕಾ ಹೈ " ಯಲ್ಲಿ ತಿಳಿ ಹಾಸ್ಯದ ಲೇಪವಿದೆ.
great job ಹಂಸಲೇಖ.
ಆದರೆ ಕಾದಂಬರಿಯನ್ನು ಸಿನಿಮಾ ಮಾಡಿದಾಗ ಆದಕ್ಕೆ ಅದರದೇ ಆದ limitationಗಳು ಇರುತ್ತವೆ. ಹಾಡು ಸಂಗೀತಕ್ಕೆ ಜಾಗ ಕೊಟ್ಟಿರುವುದರಿಂದ ಕಾದಂಬರಿಯಲ್ಲಿ ಬರುವ ಜಯದೇವ -ರತ್ನ ಪ್ರೇಮಕಥೆಯ ಬಹಳಷ್ಟು enjoyable ತಿಳಿ ಹಾಸ್ಯದ ಭಾಗಗಳು ಮಾಯವಾಗಿದೆ. ಅದೇ ದುಃಖಕರ ವಿಷಯ. ಆ ದೃಶ್ಯಗಳು ಇದ್ದಿದ್ದರೆ ಚಿತ್ರ ಇನ್ನೂ enjoyable ಅಗುತ್ತಿತ್ತು.
ಆದರೆ 3 ಘಂಟೆ 15 ನಿಮಿಷದಲ್ಲಿ ಕಾದಂಬರಿಯ ಮೂಲವಸ್ತು ವಿಗೆ ಧಕ್ಕೆ ಬರದಂತೆ ಸಿನಿಮಾ ಮಾಡುವುದು ಬಹಳ ಕಷ್ಟದ ಕೆಲಸ .ಕಾದಂಬರಿಯ ಮೂಲವಸ್ತು ವಿಗೆ ಧಕ್ಕೆ ಬರದಂತೆ ಸಿನಿಮಾ ಮಾಡಿದಕ್ಕೆ ಧನ್ಯವಾದಗಳು ನಾಗಾಭರಣ.